ನವದೆಹಲಿ: 8ನೇ ತರಗತಿಯವರೆಗೆ ಕಲಿತ ವ್ಯಕ್ತಿಯೊಬ್ಬ ತಾನು ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಎಂದು ಹೇಳಿ ಕನಿಷ್ಠ ಹನ್ನೆರಡು ಮಹಿಳೆಯರಿಗೆ ಲಕ್ಷ ಲಕ್ಷ ರೂಪಾಯಿಗಳನ್ನು ವಂಚಿಸಿರುವ ಘಟನೆ ದೆಹಲಿಯಲ್ಲಿ ವರದಿಯಾಗಿದೆ.
ಆರೋಪಿ ವಿಕಾಸ್ ಗೌತಮ್, ವಿಕಾಸ್ ಯಾದವ್ ಹೆಸರಿನಲ್ಲಿ ಟ್ವಿಟರ್, ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ನಲ್ಲಿ ನಕಲಿ ಪ್ರೊಫೈಲ್‌ಗಳನ್ನು ರಚಿಸಿ ಮೋಸ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಪ್ರೊಫೈಲ್ ಅನ್ನು ಅಧಿಕೃತವಾಗಿ ಕಾಣುವಂತೆ ಮಾಡಲು, ಆತ ಕೆಂಪು ದೀಪವನ್ನು ಹೊಂದಿರುವ ಸರ್ಕಾರಿ ಕಾರಿನೊಂದಿಗೆ ಪೋಸ್ ನೀಡಿರುವ ಫೋಟೋ ಹಾಕಿಕೊಂಡಿದ್ದಾನೆ.
ದೆಹಲಿಯ ಸಂಜಯ್ ಗಾಂಧಿ ಆಸ್ಪತ್ರೆಯ ವೈದ್ಯೆಯೊಬ್ಬರಿಗೆ ಮೋಸ ಮಾಡಿದಾಗ ವಂಚನೆ ಬೆಳಕಿಗೆ ಬಂದಿದೆ.
ಮೊದಲು ಪರಿಚಯ ಮಾಡಿಕೊಂಡ ಈತ ಆನ್‌ಲೈನ್‌ನಲ್ಲಿ ಚಾಟ್ ಮಾಡಲು ಪ್ರಾರಂಭಿಸಿದ್ದಾನೆ. ನಂತರ ವೈದ್ಯೆ ಬಳಿಯಿಂದ 25 ಸಾವಿರ ರೂಪಾಯಿ ಲಪಟಾಯಿಸಿದ್ದಾನೆ. ನಂತರ ವೈದ್ಯೆಗೆ ತಾವು ಮೋಸ ಹೋಗಿರುವುದು ತಿಳಿದಿದೆ.
ಆತ ಬೆದರಿಕೆ ಹಾಕಿದ ಹೊರತಾಗಿಯೂ ವೈದ್ಯೆ ಪೊಲೀಸರಲ್ಲಿ ದೂರು ದಾಖಲು ಮಾಡಿದಾಗ ಈತ ಸಿಕ್ಕಿಬಿದ್ದಿದ್ದು, ಬಹಳ ಮಹಿಳೆಯರಿಗೆ ಮೋಸ ಮಾಡಿರುವುದು ತಿಳಿದಿದೆ. ಸದ್ಯ ಆತನನ್ನು ಪೊಲೀಸರು ಬಂಧಿಸಿದ್ದಾರೆ.