ನವದೆಹಲಿ: ದೆಹಲಿಯ ಮಂಗೋಲ್ಪುರಿ ಪ್ರದೇಶದಲ್ಲಿ ತನ್ನ ಸಹೋದರನನ್ನು ಕೊಂದು ಶವವನ್ನು ವಿಲೇವಾರಿ ಮಾಡಲು ಯತ್ನಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
26ರ ಹರೆಯದ ಲಲಿತ್ ಕುಮಾರ್ ಪೊಲೀಸ್ ಠಾಣೆಗೆ ತೆರಳಿ ತನ್ನ ಸಹೋದರ ಜೈಕಿಶನ್ ಅಲಿಯಾಸ್ ಜೈಚಂದ್ (23) ಎಂಬಾತನನ್ನು ಕೊಂದು ತಂದೆಯ ಸಹಾಯದಿಂದ ಮೃತದೇಹವನ್ನು ವಿಲೇವಾರಿ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಡಿಸೆಂಬರ್ 14ರಂದು ಬೆಳಗಿನ ಜಾವ 2.15ರ ಸುಮಾರಿಗೆ ಈ ಘಟನೆ ನಡೆದಿದೆ. ಮಂಗಲ್ಪುರಿ ಠಾಣೆಗೆ ಬಂದ ಲಲಿತ್ಕುಮಾರ್ ತಾನು ಕೊಲೆ ಮಾಡಿ ಶವವನ್ನು ಮನೆ ಸಮೀಪದ ಉದ್ಯಾನವನದಲ್ಲಿ ಎಸೆದಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾನೆ.
ಲಲಿತ್ ಪ್ರಕಾರ, ಆತನ ಸಹೋದರ ಮಾದಕ ವ್ಯಸನಿಯಾಗಿದ್ದು, ಹಣದ ವಿಚಾರವಾಗಿ ಕುಟುಂಬ ಸದಸ್ಯರೊಂದಿಗೆ ಆಗಾಗ್ಗೆ ಜಗಳವಾಡುತ್ತಿದ್ದ. ಡಿಸೆಂಬರ್ 12ರಂದು ಸಂಜೆ ಜೈಕಿಶನ್ ತನ್ನ ತಾಯಿಯನ್ನು ಥಳಿಸಿದ ನಂತರ ಆಕೆ ಮನೆಯಿಂದ ಹೊರಟು ಹೋಗಿದ್ದಳು. ಮರುದಿನ ಬೆಳಗ್ಗೆ ಅವರ ತಂದೆ ಓಂಪ್ರಕಾಶ (60) ಮತ್ತು ಇನ್ನೊಬ್ಬ ಸಹೋದರ ಅವರು ಕೆಲಸ ಮಾಡುತ್ತಿದ್ದ ಶೂ ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಹೋದ ನಂತರ, ಲಲಿತ್, ಜೈಕಿಶನ್ ತಲೆಗೆ ಸುತ್ತಿಗೆಯಿಂದ ಹೊಡೆದು ಶವವನ್ನು ಹಾಸಿಗೆಯ ಕೆಳಗೆ ಬಚ್ಚಿಟ್ಟಿದ್ದಾನೆ.
ತಪ್ಪೊಪ್ಪಿಗೆಯನ್ನು ಗಮನಿಸಿದ ನಂತರ, ಮಂಗೋಲ್ಪುರಿ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ (ಎಸ್ಎಚ್ಒ) ತಂಡದೊಂದಿಗೆ ಸ್ಥಳಕ್ಕೆ ಧಾವಿಸಿದಾಗ ಜೈಕಿಶನ್ ಅವರ ದೇಹವು ಲಲಿತ್ ಅವರ ಮನೆಯ ಬಳಿ ಪ್ಲಾಸ್ಟಿಕ್ ಹಾಳೆಯಲ್ಲಿ ಸುತ್ತಿರುವುದನ್ನು ಕಂಡುಹಿಡಿದಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.