ನ್ಯೂಯಾರ್ಕ್: 2030ರ ಹೊತ್ತಿಗೆ ಮಾನವ ಚಂದ್ರನ ಮೇಲೆ ವಾಸಮಾಡಬಹುದು ಎಂದು ನಾಸಾ ಹೇಳಿದೆ. ನಾಸಾದ ಓರಿಯನ್ ಬಾಹ್ಯಾಕಾಶ ನೌಕೆಯ ಅಭಿಯಾನದ ಪ್ರಮುಖರಾದ ಹೊವಾರ್ಡ್ ಹೂ ಈ ಹೇಳಿಕೆ ನೀಡಿದ್ದಾರೆ. ಚಂದ್ರ ಗ್ರಹದಲ್ಲಿ ವಾಸಿಸುವ ಯೋಜನೆಗೆ ಸಹಾಯ ಮಾಡಲು ರೋವರ್ಗಳು ಕೆಲಸ ಮಾಡಲಿವೆ ಎಂದು ಹೊವಾರ್ಡ್ ಹೇಳಿದ್ದಾರೆ.
ಚಂದ್ರನಲ್ಲಿ ಮನುಷ್ಯರಿಗೆ ವಾಸಿಸಲು ಸ್ಥಳವಿದೆ. ನಾವು ಚಂದ್ರನ ಮೇಲೆ ಮನುಷ್ಯರನ್ನು ಕಳುಹಿಸುತ್ತೇವೆ. ಮನುಷ್ಯರು ಅಲ್ಲಿಯೇ ಉಳಿದು ವೈಜ್ಞಾನಿಕ ಕೆಲಸ ಮಾಡಲಿದ್ದಾರೆ. ಶೀಘ್ರದಲ್ಲೇ ಚಂದ್ರ ಗ್ರಹದ ಪರಿಸರಕ್ಕೆ ಹೊಂದಿಕೊಳ್ಳುತ್ತಾರೆ. ಈ ಕಾರ್ಯಾಚರಣೆಯನ್ನು ನಾಸಾ ಮಾಡಲಿದೆ. ಇದರ ಭಾಗವಾಗಿ ಆರ್ಟೆಮಿಸ್ ರಾಕೆಟ್ ಮೂಲಕ ಓರಿಯನ್ ಬಾಹ್ಯಾಕಾಶ ನೌಕೆಯನ್ನು ಕಳುಹಿಸಲಾಗುತ್ತಿದೆ ಎಂಬ ಮಾಹಿತಿಯನ್ನು ಹೊವಾರ್ಡ್ ನೀಡಿದ್ದಾರೆ.
ಅಂದಹಾಗೆ ನಾಸಾ ಕಳೆದ ವಾರ ಆರ್ಟೆಮಿಸ್-1 ಮಿಷನ್ ಅನ್ನು ಪ್ರಾರಂಭಿಸಿದೆ. ಈ ರಾಕೆಟ್ನಲ್ಲಿ ಸಿಬ್ಬಂದಿ ಇಲ್ಲದ ಓರಿಯನ್ ಬಾಹ್ಯಾಕಾಶ ನೌಕೆಯ ಮೊದಲ ಪರೀಕ್ಷಾರ್ಥ ಹಾರಾಟ ಇದಾಗಿದೆ. ಓರಿಯನ್ ಸುಮಾರು 42 ದಿನಗಳ ಕಾಲ ಚಂದ್ರನನ್ನು ಪರೀಕ್ಷಿಸಲಿದೆ. ಇದು ಡಿಸೆಂಬರ್ 11ರಂದು ಭೂಮಿಗೆ ಮರಳುತ್ತದೆ.