ಬೆಂಗಳೂರು: ಹಾಲು, ಮೊಸರು ದರವನ್ನು ಕೆಎಂಎಫ್ 3 ರೂ. ಹೆಚ್ಚಳ ಮಾಡಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಿಢೀರ್ ಬ್ರೇಕ್ ಹಾಕಿದ್ದಾರೆ.
ಬೆಳಗ್ಗೆ ಕೆಎಂಎಫ್ ನಿಂದ ದರ ಏರಿಕೆ ಮಾಡಲಾಗಿತ್ತು. ಸಂಜೆ ಮುಖ್ಯಮಂತ್ರಿಗಳು ದರ ಏರಿಕೆಗೆ ತಡೆ ನೀಡಿದ್ದಾರೆ. ನವೆಂಬರ್ 20ರಂದು ಸಭೆ ನಡೆಯಲಿದ್ದು, ಈ ಸಭೆಯಲ್ಲಿ ದರ ಏರಿಕೆ ನಿರ್ಧಾರ ಮಾಡುವುದಾಗಿ ಕೆಎಂಎಫ್ ಹೇಳಿದೆ.
ಕಳೆದ 10 ತಿಂಗಳಿನಿಂದ ಹಾಲಿನ ದರ ಹೆಚ್ಚಳಕ್ಕೆ ಕೆಎಂಎಫ್ ಮನವಿ ಮಾಡಿದ್ದು, ಸರ್ಕಾರ ಹಾಲು ಮತ್ತು ಮೊಸರು ದರ ಹೆಚ್ಚಳ ಮಾಡಲು ಒಲವು ತೋರಿಸಲಿಲ್ಲ. ಹಾಲು ಉತ್ಪಾದಕರು ಹೋರಾಟಕ್ಕೆ ಸಜ್ಜಾಗಿರುವುದನ್ನು ತಿಳಿದ ಕೆಎಂಎಫ್ ಸೋಮವಾರ ಬೆಳಗ್ಗೆ ದಿಢೀರನೆ ಹಾಲು, ಮೊಸರು ದರ 3 ಏರಿಕೆ ಮಾಡುವುದಾಗಿ ಪ್ರಕಟಿಸಿದ್ದು, ನವೆಂಬರ್ 20ರ ಬಳಿಕ ಸಭೆ ಸೇರೋಣ ಎಂದು ಹೇಳಿದ ಮುಖ್ಯಮಂತ್ರಿಗಳು ಕೆಎಂಎಫ್ ದರ ಏರಿಕೆಗೆ ತಡೆ ನೀಡಿದ್ದಾರೆ.
ತಾತ್ಕಾಲಿಕವಾಗಿ ದರ ಹೆಚ್ಚಳ ತಡೆ ಹಿಡಯುವಂತೆ ಸಿಎಂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರಿಗೆ ಸೂಚನೆ ನೀಡಿದ್ದಾರೆ. ನ. 20 ರ ನಂತರ ಸಭೆ ಸೇರೋಣ. ಅಲ್ಲಿವರೆಗೂ ದರ ಹೆಚ್ಚಳ ಬೇಡವೆಂದು ಸಿಎಂ ಹೇಳಿದ್ದು, ಹಾಲು, ಮೊಸರು ದರ ಹೆಚ್ಚಳಕ್ಕೆ ತಡೆ ನೀಡಲಾಗಿದೆ.