ಬೆಂಗಳೂರು: ಪರೀಕ್ಷೆಯಲ್ಲಿ ಕಾಪಿ ಹೊಡೆದ ಎಂಬ ಕಾರಣಕ್ಕೆ ಶಾಲೆ ಆಡಳಿತ ಮಂಡಳಿ ವಿದ್ಯಾರ್ಥಿಯನ್ನು ಶಾಲೆಯಿಂದ ಹೊರಹಾಕಿದ್ದಕ್ಕೆ ಅಪಾರ್ಟ್ ಮೆಂಟ್ ನಿಂದ ಜಿಗಿದು ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನ ಹೆಗಡೆ ನಗರದಲ್ಲಿ ನಡೆದಿದೆ.
ಶಾಲೆಯಿಂದ ಇನ್ನೋರ್ವ ಬಾಲಕನೊಂದಿಗೆ ಅಪಾರ್ಟ್ ಮೆಂಟ್ ಒಂದರ ಮೇಲೆ ಹತ್ತಿದ ವಿದ್ಯಾರ್ಥಿ ನೋಡ ನೋಡುತ್ತಿದ್ದಂತೆಯೇ 14ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿದ್ಯಾರ್ಥಿ ಅಪಾರ್ಟ್ ಮೆಂಟ್ ನಿಂದ ಬೀಳುತ್ತಿದ್ದ ವೇಳೆ ಆತನ ರಕ್ಷಣೆಗಾಗಿ ವ್ಯಕ್ತಿಯೋರ್ವ ಹರಸಾಹಸ ಪಟ್ಟಿದ್ದಾನೆ. ಆದರೂ ವಿದ್ಯಾರ್ಥಿ ರಕ್ಷಣೆ ಸಾಧ್ಯವಾಗಿಲ್ಲ.
ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ಮೋಹಿನ್ ಖಾನ್ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ವಿದ್ಯಾರ್ಥಿ ಸಿಗ್ನೇಚರ್ ಅಪಾರ್ಟ್ ಮೆಂಟ್ ನಿಂದ ಕೆಳಗೆ ಹಾರಿರುವ ದೃಶ್ಯ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ.
ಸಿಗ್ನೇಚರ್ ಅಪಾರ್ಟ್ ಮೆಂಟ್ ಗೆ ಅಪರಿಚಿತರ ಪ್ರವೇಶಕ್ಕೆ ಅವಕಾಶವೇ ಇಲ್ಲ. ಆದಾಗ್ಯೂ ವಿದ್ಯಾರ್ಥಿ ಬಂದಿದ್ದು ಹೇಗೆ ? ಅಲ್ಲದೇ 14ನೇ ಮಹಡಿವರೆಗೂ ಆತ ತೆರಳಿದ್ದು ಭದ್ರತಾ ಸಿಬ್ಬಂದಿಗಳಿಗೆ ಗೊತ್ತಾಗಲಿಲ್ಲವೇ ಎಂಬುದು ಪ್ರಶ್ನೆ. ಕಾಪಿ ಹೊಡೆದು ಸಿಕ್ಕಿಬಿದ್ದ ಎಂಬ ಕಾರಣಕ್ಕೆ ಏಕಾಏಕಿ ಶಾಲೆಯಿಂದ ಮೋಹಿನ್ ನನ್ನು ಹೊರಹಾಕಿದ್ದು ಸರಿಯಲ್ಲ. ಪೋಷಕರಿಗೆ ಮಾಹಿತಿ ನೀಡಬೇಕಿತ್ತು ಎಂಬುದು ಪೋಷಕರ ಅಳಲು.
ವಿದ್ಯಾರ್ಥಿ ಆತ್ಮಹತ್ಯೆ ಹಿನ್ನೆಲೆಯಲ್ಲಿ ಶಾಲೆಯ ವಿರುದ್ಧ ಪೋಷಕರು ದೂರು ದಾಖಲಿಸಿದ್ದು, ಸಂಪಿಗೆ ಹಳ್ಳಿ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.