ಬೆಳಗಾವಿ- ಕ್ರಿಕೆಟ್ನ ದೇವರು ಎಂದೇ ಪ್ರಸಿದ್ಧರಾಗಿರುವ ಸಚಿನ್ ತೆಂಡೂಲ್ಕರ್ ಇಂದು ಬೆಳಗಾವಿಯಲ್ಲಿ ಕಾಣಿಸಿಕೊಂಡಿದ್ದಾರೆ. ಸಾಮಾನ್ಯರಲ್ಲಿ ಸಾಮಾನ್ಯರಂತೆ ರಸ್ತೆ ಪಕ್ಕದ ಗೂಡಂಗಡಿಯೊಂದರಲ್ಲಿ ಟೀ ಕುಡಿದಿದ್ದಾರೆ. ನಿಜಕ್ಕೂ ಅವರ ಸರಳತೆಗೆ ಅಲ್ಲಿದ್ದ ಜನ ಆಶ್ಚರ್ಯ ಚಕಿತರಾಗಿದ್ದಾರೆ. ಇನ್ನು ಟೀ ಕುಡಿದು ಬಳಿಕ ಸೆಲ್ಪಿ ವಿಡಿಯೋ ಕ್ಲಿಕ್ಕಿಸಿಕೊಂಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹೌದು, ಸಚಿನ್ ತೆಂಡೂಲ್ಕರ್ ಮುಂಬೈಯಿಂದ ಬೆಳಗಾವಿ ಮಾರ್ಗವಾಗಿ ಗೋವಾಗೆ ತೆರಳುತ್ತಿದ್ದರು ಎನ್ನಲಾಗಿದೆ. ಗೋವಾಗೆ ಹೋಗುವ ಮಧ್ಯೆ ಟೀ ಸವಿಯಲು ಮುಂದಾಗಿದ್ದಾರೆ. ಬೆಳಗಾವಿ ಹೊರ ವಲಯದ ಮಚ್ಚೆ ಬಳಿಯ ರಾಷ್ಟ್ರೀಯ ಹೆದ್ದಾರಿ 4 ಪಕ್ಕದಲ್ಲಿರುವ ವೈಜು ನಿತೂರ್ಕರ್ ಎಂಬುವರ ಫೌಜಿ ಟೀ ಸ್ಟಾಲ್ನಲ್ಲಿ ಟೀ ಕುಡಿದಿದ್ದಾರೆ.
ಗೋವಾಕ್ಕೆ ಕುಟುಂಬ ಸಮೇತ ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ. ಅದೇನೆ ಇದ್ದರೂ ಸಾಮಾನ್ಯರಂತೆ ಬಂದು ಒಂದು ಗೂಂಡಂಗಡಿಯಲ್ಲಿ ಟೀ ಕುಡಿದಿರೋದು ವಿಶೇಷ. ಜೊತೆಗೆ ಅಲ್ಲಿದ್ದವರ ಜೊತೆ ಫೋಟೋ ತೆಗೆದುಕೊಂಡಿದ್ದು ಇನ್ನೂ ವಿಶೇಷ.