ಬಂಗಾಳದ ಹೊಸ ಜಲ್ಪೈಗುರಿ ನಿಲ್ದಾಣದಲ್ಲಿ ರೈಲು ಕೋಚ್ ಅನ್ನು ರೆಸ್ಟೋರೆಂಟ್ ಆಗಿ ಪರಿವರ್ತಿಸಲಾಗಿದೆ. ಈ ರೆಸ್ಟೋರೆಂಟ್ 32 ಜನರ ಸಾಮರ್ಥ್ಯವನ್ನು ಹೊಂದಿದೆ. ಪ್ರಯಾಣಿಕರಿಗೆ ರೈಲ್ವೆ ನಿಲ್ದಾಣದ ವಾತಾವರಣವನ್ನು ನೀಡುವ ರೀತಿಯಲ್ಲಿ ರೆಸ್ಟೋರೆಂಟ್ ಅನ್ನು ವಿನ್ಯಾಸಗೊಳಿಸಲಾಗಿದೆ.
ಈ ಕುರಿತು ರೈಲ್ವೆ ಸಚಿವಾಲಯ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದೆ. “ಕೋಚ್ ಟು ರೆಸ್ಟೊರೆಂಟ್” ಎಂಬ ಶೀರ್ಷಿಕೆ ನೀಡಿ ಇದರ ಮಾಹಿತಿ ಶೇರ್ ಮಾಡಲಾಗಿದೆ.
‘ಪ್ರಯಾಣಿಕರಿಗೆ ಅನನ್ಯ ಅನುಭವವನ್ನು ನೀಡುವ ಉದ್ದೇಶದಿಂದ, ಪಶ್ಚಿಮ ಬಂಗಾಳದ ನ್ಯೂ ಜಲ್ಪೈಗುರಿ ರೈಲ್ವೆ ನಿಲ್ದಾಣದಲ್ಲಿ ಕಲಾತ್ಮಕವಾಗಿ ವಿನ್ಯಾಸಗೊಳಿಸಲಾದ ರೈಲ್ ಕೋಚ್ ರೆಸ್ಟೋರೆಂಟ್ ಅನ್ನು ತೆರೆಯಲಾಗಿದೆ. ಹಳೆಯ ಪ್ಯಾಸೆಂಜರ್ ಕೋಚ್ ಅನ್ನು ಮರುಬಳಕೆ ಮಾಡುವ ಮೂಲಕ ರೆಸ್ಟೋರೆಂಟ್ ಅನ್ನು ಸ್ಥಾಪಿಸಲಾಗಿದೆ’ ಎಂದು ರೈಲ್ವೆ ಇಲಾಖೆ ಹೇಳಿದೆ.
ರೈಲ್ ಕೋಚ್ ರೆಸ್ಟೊರೆಂಟ್’ ಉತ್ತರ ಭಾರತ ಮತ್ತು ದಕ್ಷಿಣ ಭಾರತದಿಂದ ಚೈನೀಸ್ವರೆಗೆ ವಿಭಿನ್ನ ಅಡುಗೆಗಳನ್ನು ಒದಗಿಸುತ್ತದೆ ಎಂದು ನ್ಯೂ ಜಲ್ಪೈಗುರಿ ಜಂಕ್ಷನ್ನ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಸಂಜಯ್ ಚಿಲ್ವಾರ್ವಾರ್ ತಿಳಿಸಿದ್ದಾರೆ. ಇಲ್ಲಿ ಚಹಾ, ಬಿರಿಯಾನಿ, ಫ್ರೈಡ್ ರೈಸ್, ಚಿಲ್ಲಿ ಚಿಕನ್, ಮೊಮೊಸ್, ದೋಸೆ ಎಲ್ಲವೂ ಸಿಗುತ್ತದೆ.
‘ರೆಸ್ಟೋರೆಂಟ್ನಿಂದ ರೈಲ್ವೆಯ ಆದಾಯವನ್ನು ಹೆಚ್ಚಿಸುವುದು ಮಾತ್ರವಲ್ಲದೆ ಪ್ರಯಾಣಿಕರು ರೈಲು ಕೋಚ್ನಲ್ಲಿ ಊಟ ಮಾಡುವ ವಿಶಿಷ್ಟ ಅನುಭವವನ್ನು ಪಡೆಯಲು ಸಾಧ್ಯವಾಗುತ್ತದೆ’ ಎಂದು ಅವರು ಹೇಳಿದ್ದಾರೆ. ತಮ್ಮ ಬಾಯಲ್ಲಿ ನೀರೂರಿಸುವ ಆಹಾರಗಳು ಇಲ್ಲಿ ಸಿಗುತ್ತಿವೆ ಎಂದು ಪ್ರಯಾಣಿಕರು ಅನುಭವ ಹಂಚಿಕೊಳ್ಳುತ್ತಿದ್ದಾರೆ.