ಮದುವೆ ಜೀವನದ ಮಹತ್ವದ ಘಟ್ಟ. ಮದುವೆ ನಂತ್ರ ಸಂಗಾತಿಯ ವರ್ತನೆ, ಜವಾಬ್ದಾರಿ ಸಂಸಾರ ಎಷ್ಟು ದಿನ ನಡೆಯುತ್ತೆ ಎಂಬೆಲ್ಲ ಪ್ರಶ್ನೆಗಳಿಗೆ ಉತ್ತರ ನೀಡುವುದು ಕಷ್ಟ. ಮದುವೆ ವೇಳೆ ಪತಿ-ಪತ್ನಿಯಾಗುವವರ ವಯಸ್ಸನ್ನು ಗಮನಕ್ಕೆ ತೆಗೆದುಕೊಳ್ಳಲಾಗುತ್ತದೆ. ಸುಖ ಸಂಸಾರಕ್ಕೆ ಪತಿ-ಪತ್ನಿ ನಡುವಿರುವ ವಯಸ್ಸಿನ ಅಂತರವೂ ಮಹತ್ವದ ಪಾತ್ರ ವಹಿಸುತ್ತದೆ.
ದಂಪತಿ ವಯಸ್ಸಿನ ಅಂತರ ಅವರ ಮದುವೆ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬ ಬಗ್ಗೆ ಸಂಶೋಧನೆ ನಡೆಸಲಾಗಿದೆ. ಸಂಶೋಧನೆಯಲ್ಲಿ 3 ಸಾವಿರ ದಂಪತಿ ಪಾಲ್ಗೊಂಡಿದ್ದರು.
ಸಂಶೋಧನೆ ಪ್ರಕಾರ ದಂಪತಿ ನಡುವೆ ವಯಸ್ಸಿನ ಅಂತರ 5 ವರ್ಷದೊಳಗಿದ್ದರೆ ಮದುವೆ ಮುರಿದು ಬೀಳುವ ಸಾಧ್ಯತೆ ಶೇಕಡಾ 18ರಷ್ಟಿರುತ್ತದೆ. ವಯಸ್ಸಿನ ಅಂತರ 10 ವರ್ಷದಷ್ಟಿದ್ದರೆ ಮದುವೆ ಮುರಿದು ಬೀಳುವ ಸಾಧ್ಯತೆ ಶೇಕಡಾ 39ರಷ್ಟಿರುತ್ತದೆ. ಅಂತರ 20ಕ್ಕಿಂತ ಹೆಚ್ಚಿದ್ದರೆ ಮದುವೆ ಮುರಿದು ಬೀಳುವ ಸಾಧ್ಯತೆ ಶೇಕಡಾ 95ರಷ್ಟಿರುತ್ತದೆ. ದಂಪತಿ ವಯಸ್ಸಿನ ಅಂತರ ಒಂದು ವರ್ಷಕ್ಕಿಂತಲೂ ಕಡಿಮೆಯಿದ್ದರೆ ಮದುವೆ ಮುರಿದು ಬೀಳುವ ಸಾಧ್ಯತೆ ಶೇಕಡಾ 3ರಷ್ಟಿರುತ್ತದೆ ಎಂದು ಸಂಶೋಧನೆ ಹೇಳಿದೆ.
ಭಾರತದಲ್ಲಿ ಸಾಮಾನ್ಯವಾಗಿ ಹುಡುಗಿಗಿಂತ ಹುಡುಗನ ವಯಸ್ಸು ಹೆಚ್ಚಿರುತ್ತದೆ. ಹೆಚ್ಚು ವಯಸ್ಸಿನ ಹುಡುಗನ ಜೊತೆ ಮದುವೆ ಮಾಡಲು ಕಾರಣವೂ ಇದೆ. ಸಾಮಾನ್ಯವಾಗಿ ಹುಡುಗಿಯರು ಹುಡುಗರಿಗಿಂತ ವೇಗವಾಗಿ ಬೆಳೆಯುತ್ತಾರೆ. ಒಂದು ವೇಳೆ ಹುಡುಗರ ವಯಸ್ಸು ಕಡಿಮೆಯಿದ್ದರೆ ಈ ದಾಂಪತ್ಯದಲ್ಲಿ ಹೊಂದಾಣಿಕೆ ಸ್ವಲ್ಪ ಕಷ್ಟವಾಗುತ್ತದೆ.
ಸರಿ ವಯಸ್ಸಿನ ಹುಡುಗ-ಹುಡುಗಿ ಮದುವೆಯಾದಲ್ಲಿ ಇಬ್ಬರ ಆಲೋಚನೆ, ಬುದ್ದಿ ಒಂದೇ ರೀತಿ ಇರುವುದರಿಂದ ಅರ್ಥ ಮಾಡಿಕೊಳ್ಳುವುದು ಸುಲಭವಾಗುತ್ತದೆ ಎಂದು ಸಂಶೋಧನೆಯಲ್ಲಿ ಹೇಳಲಾಗಿದೆ.