41 ವರ್ಷಗಳ ಹಿಂದೆ ರಾಜಕುಮಾರಿ ಡಯಾನ ಮತ್ತು ಕಿಂಗ್ ಚಾರ್ಲ್ಸ್ ರಾಜಮನೆತದ ವಿವಾಹ ಸಂದರ್ಭದಲ್ಲಿ ತಯಾರಿಸಲಾಗಿದ್ದ ಕೇಕ್ ತುಂಡೊಂದನ್ನು ಹರಾಜು ಮಾಡಲಾಗುತ್ತಿದ್ದು, ಇದು ಲಕ್ಷಾಂತರ ರೂಪಾಯಿಗಳಿಗೆ ಬಿಕರಿಯಾಗಬಹುದು ಎಂದು ಅಂದಾಜಿಸಲಾಗಿದೆ.
1981 ರಲ್ಲಿ ನಡೆದಿದ್ದ ಈ ವಿವಾಹ ಸಂದರ್ಭದಲ್ಲಿ 3000ಕ್ಕೂ ಅಧಿಕ ಗಣ್ಯರು ಪಾಲ್ಗೊಂಡಿದ್ದು, ಕಳೆದ ವರ್ಷ ವಿಧಿವಶರಾದ ನಿಗೆಲ್ ರಿಕೆಟ್ಸ್ ಎಂಬ ಅತಿಥಿ 41 ವರ್ಷಗಳಿಂದ ಈ ಕೇಕ್ ತುಂಡನ್ನು ಜತನದಿಂದ ಕಾಪಾಡಿಕೊಂಡು ಬಂದಿದ್ದರು. ಇದೀಗ ಅವರ ಕುಟುಂಬ ಸಂಸ್ಥೆಯೊಂದರ ಸಹಯೋಗದಲ್ಲಿ ಹರಾಜು ಮಾಡುತ್ತಿದೆ.
ವಿವಾಹ ಸಂದರ್ಭದಲ್ಲಿ ನೀಡಲಾಗಿದ್ದ ಮೂಲ ಪೆಟ್ಟಿಗೆಯಲ್ಲಿ ಈ ಕೇಕ್ ತುಂಡನ್ನು ಪ್ಯಾಕ್ ಮಾಡಲಾಗಿದ್ದು, ಅದರ ಮೇಲೆ ರಾಜಮನೆತನದ ಸಿಬ್ಬಂದಿಯ ಕೈಬರಹದ ಧನ್ಯವಾದ ಟಿಪ್ಪಣಿ ಸಹ ಇದೆ. ಇತ್ತೀಚೆಗಷ್ಟೇ ರಾಣಿ ಎಲಿಜಬೆತ್ ಅವರ ಟೀ ಬ್ಯಾಗ್ ಬರೋಬ್ಬರಿ 9.5 ಲಕ್ಷ ರೂಪಾಯಿಗಳಿಗೆ ಮಾರಾಟವಾಗಿ ಅಚ್ಚರಿ ಮೂಡಿಸಿತ್ತು.