ಜ್ಞಾನವಾಪಿ ಮಸೀದಿ ಆವರಣದಲ್ಲಿ ಪತ್ತೆಯಾಗಿದೆ ಎನ್ನಲಾದ ‘ಶಿವಲಿಂಗ’ ದ ಕಾರ್ಬನ್ ಡೇಟಿಂಗ್ ಕೋರಿ ಸಲ್ಲಿಸಲಾಗಿದ್ದ ಅರ್ಜಿ ಕುರಿತ ತೀರ್ಪನ್ನು ಇಂದು ವಾರಣಾಸಿ ಜಿಲ್ಲಾ ನ್ಯಾಯಾಲಯ ಪ್ರಕಟಿಸಿದ್ದು, ಅರ್ಜಿದಾರರ ಮನವಿಯನ್ನು ತಿರಸ್ಕರಿಸಲಾಗಿದೆ. ಹೀಗಾಗಿ ಕಾರ್ಬನ್ ಡೇಟಿಂಗ್ ಗೆ ಕೋರಿದ್ದ ಅರ್ಜಿಯನ್ನು ಪುರಸ್ಕರಿಸಬಾರದು ಎಂಬ ಮಸೀದಿ ಸಮಿತಿ ವಾದ ಎತ್ತಿ ಹಿಡಿದಂತಾಗಿದೆ.
ತೀರ್ಪು ಪ್ರಕಟವಾಗುವ ಹಿನ್ನಲೆಯಲ್ಲಿ ಇಂದು ನ್ಯಾಯಾಲಯದ ಆವರಣದಲ್ಲಿ ಬಿಗಿ ಭದ್ರತೆಯನ್ನು ಏರ್ಪಡಿಸಲಾಗಿತ್ತು. ಕೆಲ ಕ್ಷಣಗಳ ಹಿಂದೆ ತೀರ್ಪು ಹೊರ ಬಿದ್ದಿದ್ದು, ಶಿವಲಿಂಗದ ವಯಸ್ಸನ್ನು ಅರಿಯಲು ವೈಜ್ಞಾನಿಕ ವಿಧಾನವಾದ ಕಾರ್ಬನ್ ಡೇಟಿಂಗ್ ನಡೆಸಬೇಕೆಂಬ ಹಿಂದೂ ಅರ್ಜಿದಾರರ ಮನವಿಯನ್ನು ತಿರಸ್ಕರಿಸಲಾಗಿದೆ.
ವಾರಣಾಸಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಅಜಯ್ ಕೃಷ್ಣ ತಮ್ಮ ತೀರ್ಪು ಪ್ರಕಟಿಸಿದ್ದು, ಶಿವಲಿಂಗದ ಕಾರ್ಬನ್ ಡೇಟಿಂಗ್ ನಡೆಸಬೇಕೆಂಬ ಅರ್ಜಿದಾರರ ಮನವಿಗೆ ನಕಾರ ಸೂಚಿಸಿದ್ದಾರೆ. ತೀರ್ಪು ತಮ್ಮ ವಿರುದ್ದ ಬಂದಿರುವ ಹಿನ್ನಲೆಯಲ್ಲಿ ಮೇಲ್ಮನವಿ ಸಲ್ಲಿಸಲು ಅರ್ಜಿದಾರರು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಕಾರ್ಬನ್ ಡೇಟಿಂಗ್ ಎನ್ನುವುದು ಯಾವುದೇ ವಸ್ತುವಿನ ವಯಸ್ಸನ್ನು ನಿಖರವಾಗಿ ತಿಳಿದುಕೊಳ್ಳಲು ಪುರಾತತ್ತ್ವ ಶಾಸ್ತ್ರದಲ್ಲಿ ಬಳಸುವ ಪ್ರಕ್ರಿಯೆಯಾಗಿದ್ದು, ಜ್ಞಾನವಾಪಿ ಮಸೀದಿ ಸಮಿತಿಯು ಕಾರ್ಬನ್ ಡೇಟಿಂಗ್ ಮನವಿಯನ್ನು ಪುರಸ್ಕರಿಸಬಾರದೆಂದು ನ್ಯಾಯಾಲಯದಲ್ಲಿ ವಾದ ಮಂಡಿಸಿತ್ತು.