ದೀಪಾವಳಿ ಹಬ್ಬಕ್ಕೆ ವಾಹನ ಸವಾರರಿಗೆ ಭರ್ಜರಿ ಗಿಫ್ಟ್ ಕೊಡಲು ಭಾರತದ ವಾಹನ ತಯಾರಕ ಕಂಪನಿ ಓಲಾ ಎಲೆಕ್ಟ್ರಿಕ್ ಮುಂದಾಗಿದೆ. ಹಬ್ಬದ ನಿಮಿತ್ತ ಈ ಕಂಪನಿ ಭಾರತದಲ್ಲಿ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಲಿದೆ, ಇದು S1ನ ರೂಪಾಂತರವಾಗಿದೆ.
ಹೊಸ ಸ್ಕೂಟರ್ನ ಬೆಲೆ 80,000 ರೂಪಾಯಿಗಳಿಗಿಂತ ಕಡಿಮೆಯಿರುತ್ತದೆ ಅನ್ನೋದು ವಿಶೇಷ. ಇದು ದೇಶದ ಅತ್ಯಂತ ಕೈಗೆಟುಕುವ ದರದ ಪ್ರೀಮಿಯಂ ಇ-ಸ್ಕೂಟರ್ ಗಳಲ್ಲಿ ಒಂದಾಗಿದೆ.
ಈ ಸ್ಕೂಟರ್ನ ಮುಂಭಾಗ ಬಹುತೇಕ S1 ಅನ್ನೇ ಹೋಲುತ್ತದೆ. ಓಲಾ ಎಲೆಕ್ಟ್ರಿಕ್, ಈ ಸ್ಕೂಟರ್ನಲ್ಲೂ MoveOS ಸಾಫ್ಟ್ವೇರ್ ಅನ್ನು ಮುಂದುವರಿಸಲಿದೆ. ಓಲಾ ಸಿಇಒ ಭವಿಶ್ ಅಗರ್ವಾಲ್ ಹೊಸ ಸ್ಕೂಟರ್ ಲಾಂಚ್ ಕುರಿತಂತೆ ಟ್ವೀಟ್ ಸಹ ಮಾಡಿದ್ದಾರೆ. ಈ ತಿಂಗಳ ಕೊನೆಯಲ್ಲಿ ಭಾರತದ ಗ್ರಾಹಕರಿಗೆ ಬಂಪರ್ ಕೊಡುಗೆ ನೀಡೋದಾಗಿ ಘೋಷಣೆ ಮಾಡಿದ್ದಾರೆ.
ಈ ವರ್ಷದ ಆರಂಭದಲ್ಲಿ ಆಗಸ್ಟ್ 15 ರಂದು, ಓಲಾ ಎಲೆಕ್ಟ್ರಿಕ್ ಭಾರತೀಯ ಮಾರುಕಟ್ಟೆಯಲ್ಲಿ ಎಸ್1 ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿತ್ತು. ಇದರ ಬೆಲೆ 99,999 ರೂಪಾಯಿ ಇತ್ತು. Ola S1 ವಿತರಣೆ ಸೆಪ್ಟೆಂಬರ್ 7ರಿಂದ ಪ್ರಾರಂಭವಾಗಿದೆ. ಇದು ಒಂದೇ ಚಾರ್ಜ್ನಲ್ಲಿ 141 ಕಿಮೀ ವ್ಯಾಪ್ತಿಯನ್ನು ಹೊಂದಿದೆ. ಗಂಟೆಗೆ ಇದು 95 ಕಿಮೀ ವೇಗದಲ್ಲಿ ಚಲಿಸಬಲ್ಲದು.
ಓಲಾ ಎಲೆಕ್ಟ್ರಿಕ್ ಪ್ರಸ್ತುತ ಎರಡು ಎಲೆಕ್ಟ್ರಿಕ್ ಸ್ಕೂಟರ್ಗಳನ್ನು ಹೊಂದಿದೆ. S1 ಪ್ರೊ ಮತ್ತು S1. ಕಂಪನಿಯು ಆಲ್-ಎಲೆಕ್ಟ್ರಿಕ್ ಕಾರ್ ಅನ್ನು ಕೂಡ ಅಭಿವೃದ್ಧಿಪಡಿಸುತ್ತಿದೆ. ಅದು 2024ರಲ್ಲಿ ಮಾರುಕಟ್ಟೆಗೆ ಬರಲಿದ್ದು, ಒಮ್ಮೆ ಚಾರ್ಜ್ ಮಾಡಿದ್ರೆ 500 ಕಿಮೀ ಓಡುವ ಸಾಮರ್ಥ್ಯ ಹೊಂದಿರಲಿದೆ. ವಿಶೇಷ ಅಂದ್ರೆ ಓಲಾ ಎಲೆಕ್ಟ್ರಿಕ್ ಕಾರು ಕೀಲಿ ಹಾಗೂ ಹ್ಯಾಂಡಲ್ ರಹಿತವಾಗಿರುತ್ತದೆ.