ತಮ್ಮ ಇತ್ತೀಚಿನ ವೆಬ್ ಸೀರೀಸ್ XXX (ಸೀಸನ್ 2) ರಲ್ಲಿ ಯೋಧರು ಮತ್ತು ಅವರ ಕುಟುಂಬಸ್ಥರಿಗೆ ಅಪಮಾನ ಮಾಡಿದ ಕಾರಣಕ್ಕೆ ನಿರ್ಮಾಪಕಿ ಏಕ್ತಾ ಕಪೂರ್ ಅವರಿಗೆ ಸಂಕಷ್ಟ ಎದುರಾಗಿದೆ. ಈ ವೆಬ್ ಸೀರೀಸ್‌ನ ಸಹ ಪಾಲುದಾರಿಕೆ ಹೊಂದಿರುವ ಏಕ್ತಾ ಕಪೂರ್ ಅವರ ತಾಯಿ ಶೋಭಾ ಕಪೂರ್ ಸಹ ಮಗಳ ಜೊತೆ ನ್ಯಾಯಾಲಯಕ್ಕೆ ಹಾಜರಾಗಬೇಕಿದೆ.
ಮಾಜಿ ಯೋಧ ಶಂಭು ಕುಮಾರ್ ಎಂಬವರು ಬಿಹಾರದ ಬೇಗುಸರಾಯ್ ನ್ಯಾಯಾಲಯದಲ್ಲಿ ಈ ವೆಬ್ ಸೀರೀಸ್ ಸಂಬಂಧ ಮೊಕದ್ದಮೆ ದಾಖಲಿಸಿದ್ದು, ಇದೀಗ ನ್ಯಾಯಾಧೀಶ ವಿಕಾಸ್ ಕುಮಾರ್, ಏಕ್ತಾ ಕಪೂರ್ ಮತ್ತವರ ತಾಯಿ ಶೋಭಾ ಕಪೂರ್ ವಿರುದ್ಧ ಅರೆಸ್ಟ್ ವಾರೆಂಟ್ ಹೊರಡಿಸಿದ್ದಾರೆ.
2020ರಲ್ಲಿ ಶಂಭು ಕುಮಾರ್ ಈ ಮೊಕದ್ದಮೆಯನ್ನು ದಾಖಲಿಸಿದ್ದು, ಈ ವೆಬ್ ಸೀರೀಸ್ ಏಕ್ತಾ ಕಪೂರ್ ಪಾಲುದಾರಿಕೆ ಹೊಂದಿರುವ ಬಾಲಾಜಿ ಟೆಲಿ ಫಿಲಂಸ್ ಲಿಮಿಟೆಡ್ ಮಾಲೀಕತ್ವದ ಓಟಿಟಿ ಫ್ಲಾಟ್ ಫಾರ್ಮ್ ALTBalaji ಯಲ್ಲಿ ಪ್ರಸಾರವಾಗಿತ್ತು.
ಈ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಏಕ್ತಾ ಕಪೂರ್ ಹಾಗೂ ಶೋಭಾ ಕಪೂರ್ ಅವರಿಗೆ ನ್ಯಾಯಾಲಯ ಸೂಚನೆ ನೀಡಿದ್ದು, ವೆಬ್ ಸೀರೀಸ್ ನ ಆಕ್ಷೇಪಾರ್ಹ ದೃಶ್ಯಗಳನ್ನು ಕತ್ತರಿಸಿರುವುದಾಗಿ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದರು. ಆದರೆ ಖುದ್ದಾಗಿ ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಇಬ್ಬರ ವಿರುದ್ಧ ಈಗ ಅರೆಸ್ಟ್ ವಾರೆಂಟ್ ಜಾರಿಯಾಗಿದೆ.