ಬೆಂಗಳೂರು: ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ ಇಲ್ಲಿದೆ. ಕೊರೋನಾ ಪೂರ್ವ ರೀತಿಯಲ್ಲಿ ಈ ಬಾರಿ ಎಸ್.ಎಸ್.ಎಲ್.ಸಿ. ಪರೀಕ್ಷೆ ನಡೆಸಲಾಗುವುದು. ಸುಲಭದ ಪ್ರಶ್ನೆ ಇರುವುದಿಲ್ಲ. ವಿಸ್ತೃತ ಉತ್ತರ ಬರೆಯಬೇಕಿದೆ.
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ವತಿಯಿಂದ 2022 -23ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆ ಮಾರ್ಗಸೂಚಿ ಪ್ರಕಟಿಸಲಾಗಿದೆ. 2023ರ ಮಾರ್ಚ್ -ಏಪ್ರಿಲ್ ತಿಂಗಳಿನಲ್ಲಿ ಮುಖ್ಯ ಪರೀಕ್ಷೆ ನಡೆಯಲಿದೆ. ಮುಂದಿನ ವಾರದಿಂದ ಪರೀಕ್ಷಾ ನೋಂದಣಿ ಪ್ರಕ್ರಿಯೆ ಆರಂಭಿಸಲಾಗುತ್ತದೆ.
ಕೊರೋನಾ ಪೂರ್ವ(2019) ಮಾದರಿಯಲ್ಲಿ ಪರೀಕ್ಷೆ ನಡೆಸಲಾಗುವುದು. ಪರಿಷ್ಕೃತ ಪಠ್ಯಕ್ರಮದ ಅನ್ವಯ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಲಾಗುವುದು. ಕೊರೋನಾ ದೂರವಾಗಿ ಸಹಜ ಸ್ಥಿತಿಗೆ ಮರಳಿ ಇರುವುದರಿಂದ ಪರೀಕ್ಷೆ ನಿಗದಿಯಂತೆ ಮಾರ್ಚ್ ಮತ್ತು ಏಪ್ರಿಲ್ ನಲ್ಲಿಯೇ ನಡೆಯಲಿದೆ.
ಈ ಬಾರಿ ಪರೀಕ್ಷೆಯಲ್ಲಿ ವಿಸ್ತೃತ ಉತ್ತರ ಬರೆಯುವ ಪ್ರಶ್ನೆ ಪತ್ರಿಕೆ ಇರುತ್ತದೆ. ಶೇಕಡ 75 ರಷ್ಟು ತರಗತಿ ಹಾಜರಾತಿ ಕಡ್ಡಾಯಗೊಳಿಸಲಾಗಿದೆ. ಪ್ರಶ್ನೆ ಪತ್ರಿಕೆ ಮಾದರಿ ಮತ್ತು ಕಠಿಣತೆ ಮಟ್ಟದಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳದೆ ಯಥಾವತ್ ಅಳವಡಿಸಿಕೊಳ್ಳಲಾಗಿದೆ ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ನಿರ್ದೇಶಕ ಹೆಚ್.ಎನ್. ಗೋಪಾಲಕೃಷ್ಣ ಹೇಳಿದ್ದಾರೆ.