ಬೆಂಗಳೂರು: 40% ಕಮಿಷನ್ ಆರೋಪ ಮಾಡಿರುವ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಯ್ಯ ವಿರುದ್ಧ 50 ಕೋಟಿ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ ಎಂದು ತೋಟಗಾರಿಕಾ ಸಚಿವ ಮುನಿರತ್ನ ಮತ್ತೆ ಗುಡುಗಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಮುನಿರತ್ನ, ನನ್ನ ವಿರುದ್ಧ ಕೆಂಪಯ್ಯ ಕಮಿಷನ್ ಆರೋಪ ಮಾಡಿದ್ದಾರೆ. ನಾನು ಯಾವುದೇ ಕಮಿಷನ್ ಪಡೆದುಕೊಂಡಿಲ್ಲ. ಕೆಂಪಯ್ಯ ಸೇರಿ 18 ಜನರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ. 4 ತಿಂಗಳಲ್ಲಿ ಕೇಸ್ ಇತ್ಯರ್ಥ ಮಾಡಬೇಕು ಎಂದು ಕೋರ್ಟ್ ಗೆ ಮನವಿ ಮಾಡುತ್ತೇನೆ ಎಂದರು.
ಕಮಿಷನ್ ಪಡೆದ ಬಗ್ಗೆ ದಾಖಲೆಗಳಿದ್ದರೆ ವಿಪಕ್ಷ ನಾಯಕರು ಬಿಡುಗಡೆ ಮಾಡಲಿ, ವಿಧಾನಸಭೆಯಲ್ಲಿಯೂ ಈ ಬಗ್ಗೆ ಚರ್ಚೆ ಮಾಡಲಿ. ದಾಖಲೆ ಇಟ್ಟು ಮಾತನಾಡಿದರೆ ವಿಪಕ್ಷಗಳ ಘನತೆ ಹೆಚ್ಚಾಗುತ್ತೆ. ನಾನು ತಪ್ಪು ಮಾಡಿದರೆ ನನಗೆ ಶಿಕ್ಷೆಯಾಗಲಿ ಎಂದು ಹೇಳಿದರು.