ತಾಜ್ ಮಹಲ್ಗೆ ಭೇಟಿ ನೀಡಿದ ಮೆಕ್ಸಿಕನ್ ದಂಪತಿ ಆಗ್ರಾದಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ವಿವಾಹವಾಗಿದ್ದಾರೆ.
ತಾಜ್ ನಗರಿಯಲ್ಲಿರುವ ಶಿವ ದೇವಾಲಯದಲ್ಲಿ ಸಾಂಪ್ರದಾಯಿಕ ಹಿಂದೂ ವಿವಾಹದ ಉಡುಪಿನಲ್ಲಿ ದಂಪತಿ ಕಾಣಿಸಿಕೊಂಡರು. ಮದುವೆಯಲ್ಲಿ ಅವರಿಬ್ಬರ ಕೆಲವು ಸ್ಥಳಿಯ ಸ್ನೇಹಿತರು ಭಾಗವಹಿಸಿದ್ದರು. ಮದುವೆಯ ನಂತರ ಎಲ್ಲರೂ ಒಟ್ಟಿಗೆ ರೆಸ್ಟೋರೆಂಟ್ನಲ್ಲಿ ಊಟ ಮಾಡಿದ್ದು, ಸ್ಥಳೀಯ ಟೂರ್ ಆಪರೇಟರ್ಗಳು, ಗೆೈಡ್ ಗಳು, ಡ್ರೈವರ್ಗಳು ಮತ್ತು ಹೋಟೆಲ್ನವರು ಈ ಕಾರ್ಯಕ್ರಮದ ಅತಿಥಿ ಎಂಬುದು ವಿಶೇಷ.
ವಿದೇಶಿ ಜೋಡಿಯ ವಿವಾಹ ಸಮಾರಂಭವನ್ನು ಏರ್ಪಡಿಸುವ ಜವಾಬ್ದಾರಿಯನ್ನು ಸ್ಥಳೀಯ ಹೋಟೆಲ್ ಉದ್ಯಮಿ ಗೌರವ್ ಗುಪ್ತಾ ವಹಿಸಿಕೊಂಡಿದ್ದರು.
ಕ್ಲೌಡಿಯಾ ಮತ್ತು ಸೆರಾಮಿಕೊ ಸತಿಪತಿಗಳಾದ ಜೋಡಿ. ಕ್ಲೌಡಿಯಾ ಹೇಳುವಂತೆ “ನಾವು ತಾಜ್ ಮಹಲ್ ಕಥೆಯನ್ನು ಕೇಳಿದ್ದು, ಷಹಜಹಾನ್ ಮತ್ತು ಮುಮ್ತಾಜ್ ಅವರ ಪ್ರೇಮಕಥೆಯಿಂದ ಪ್ರಭಾವಿತರಾಗಿದ್ದೇವೆ ಮತ್ತು ನಮ್ಮ ಪ್ರೀತಿಯನ್ನು ಶಾಶ್ವತವಾಗಿ ಮತ್ತು ಸ್ಮರಣೀಯವಾಗಿ ಇರಿಸಲು ಬಯಸಿದ್ದೇವೆ. ಅದನ್ನು ಮನಸ್ಸಿನಲ್ಲಿಟ್ಟುಕೊಂಡು ನಾವು ಭಾರತಕ್ಕೆ ಭೇಟಿ ನೀಡುವ ಯೋಜನೆಯನ್ನು ಮಾಡಿದೆವು. ತದನಂತರ ನಾವು ಹಿಂದೂ ಸಂಪ್ರದಾಯದ ಪ್ರಕಾರ ಮದುವೆಯ ವಿಧಿವಿಧಾನಗಳನ್ನು ಪೂರ್ಣಗೊಳಿಸಲು ನಿರ್ಧರಿಸಿದೆವು ಎಂದರು.
ಭಾರತದ ಸಂಸ್ಕೃತಿಗೆ ಹೆಚ್ಚು ಆಕರ್ಷಿತರಾಗಿದ್ದೇವೆ ಮತ್ತು ಹಿಂದೂ ಸಂಪ್ರದಾಯದ ಪ್ರಕಾರ ಭಾರತದಲ್ಲಿ ಮದುವೆಯಾಗಲು ಬಹಳ ಹಿಂದೆಯೇ ನಿರ್ಧರಿಸಿದ್ದೆವು ಎಂದಿರುವ ಅವರು, ತಮ್ಮ ಪ್ರೀತಿ ಶಾಶ್ವತವಾಗಿ ಉಳಿಯುತ್ತದೆ ಎಂದು ಖಚಿತಪಡಿಸಿಕೊಳ್ಳಲು, ಅವರು ತಮ್ಮ ಮದುವೆಗೆ ಪ್ರೀತಿಯ ನಗರವಾದ ಆಗ್ರಾವನ್ನು ಆಯ್ಕೆ ಮಾಡಿಕೊಂಡರಂತೆ.
ಮೆಕ್ಸಿಕನ್ ದಂಪತಿಗಳು ಬೆಳಿಗ್ಗೆ ಸೂರ್ಯೋಯದ ವೇಳೆಗೆ ತಾಜ್ ಮಹಲ್ಗೆ ಭೇಟಿ ನೀಡಿ ಮಧ್ಯಾಹ್ನ ವಿವಾಹ ಸಮಾರಂದಲ್ಲಿ ಪಾಲ್ಗೊಂಡರು. ಸಂಜೆ, ದಂಪತಿ ತಮ್ಮ ಗುಂಪಿನ ಉಳಿದ ಸದಸ್ಯರೊಂದಿಗೆ ರೆಸ್ಟೋರೆಂಟ್ ಡ್ಯಾನ್ಸ್ ಮಾಡಿ ಸಂಭ್ರಮಿಸಿದ್ದಾರೆ.
ವಿದೇಶಿ ಜೋಡಿ ಆಗ್ರಾದಲ್ಲಿ ಬಂದು ಮದುವೆಯಾಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ, ಪ್ರಪಂಚದಾದ್ಯಂತದಿಂದ ಬಂದು ಆಗ್ರಾದಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ವಿವಾಹವಾದ ಅನೇಕ ಜೋಡಿಗಳು ಇವೆ. 2019 ರಲ್ಲೂ ಮೆಕ್ಸಿಕೋದ 4 ಜೋಡಿಗಳು ಹಿಂದೂ ಸಂಪ್ರದಾಯದ ಪ್ರಕಾರ ವಿವಾಹವಾದರು.