ಏಳು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕ್ರಿಮಿನಲ್ ಒಬ್ಬ ಏಕಾಏಕಿ ಒಂದು ದಿನ ಪೊಲೀಸ್ ಠಾಣೆಗೆ ಕಾಲಿಟ್ಟಾಗ ಅಲ್ಲಿನ ಸಿಬ್ಬಂದಿ ತಬ್ಬಿಬ್ಬಾಗಿದ್ದಾರೆ.
ದಕ್ಷಿಣ ಆಫ್ರಿಕಾದ ಎಂಪುಮಲಂಗಾ ಪ್ರಾಂತ್ಯದ ಪೊಲೀಸ್ ಅಧಿಕಾರಿಗಳು ಈ ಶಾಕ್ಗೆ ಒಳಗಾಗಿದ್ದು, ಆತನೇನು ತನ್ನ ತಪ್ಪಿಗಾಗಿ ಶರಣಾಗಲು ಠಾಣೆ ಮುಂದೆ ಹಾಜರಾಗಿರಲಿಲ್ಲ.
ಪೊಲೀಸ್ ನೇಮಕಾತಿ ಡ್ರೈವ್‌ಗಾಗಿ ಆತ ಅರ್ಜಿ ಸಲ್ಲಿಕೆ ಕುರಿತು ವಿಚಾರಿಸಲು ಬಂದಿದ್ದು, ಅಂತಿಮವಾಗಿ ಆತನನ್ನು ಬಂಧಿಸಲಾಯಿತು.
2015ರಲ್ಲಿ ಥಾಮಸ್ ಎನ್ಕೋಬೊ ಅವರು ಹಾರ್ಡ್ವೇರ್ ಉತ್ಪನ್ನಗಳನ್ನು ಕದ್ದಿದ್ದ ಎಂದು ಆರೋಪಿಸಲಾಗಿತ್ತು. ಆತ ಗ್ರಾಹಕನಿಗೆ ರವಾನೆ ಮಾಡುವ ಬದಲು ಆ ಮಾಲಿನೊಂದಿಗೆ ಓಡಿಹೋಗಿದ್ದ. ಆ ಉತ್ಪನ್ನವನ್ನು ಬೇರ ವಿಳಾಸಕ್ಕೆ ತಲುಪಿಸಿ, ಮಾಲಿಕರಿಂದ ಮುಚ್ಚಿಟ್ಟಿದ್ದ.
ಕಂಪನಿಯ ವ್ಯವಸ್ಥಾಪಕರು ಇನ್ವಾಯ್ಸ್ಗಳನ್ನು ಪರಿಶೀಲಿಸಿದಾಗ ವಂಚನೆ ಬೆಳಕಿಗೆ ಬಂದಿದೆ. ಶೀಘ್ರದಲ್ಲೇ, ಪ್ರಕರಣವನ್ನು ದಾಖಲಿಸಲಾಯಿತು ಮತ್ತು ಆತನ ಹೆಸರನ್ನು ವಾಂಟೆಡ್ ಪಟ್ಟಿಗೆ ಸೇರಿಸಲಾಗಿತ್ತು.
ಪೊಲೀಸರು ಎಷ್ಟೇ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಏಳು ವರ್ಷ ತಲೆಮರೆಸಿಕೊಂಡಿದ್ದ. ಈ ವರ್ಷ ಆಗಸ್ಟ್ 15ರಂದು ಎನ್ಕೋಬೋ ಸ್ವತಃ ಪೊಲೀಸರನ್ನು ಸಂಪರ್ಕಿಸಿದಾಗ ಪ್ರಕರಣ ಕೊನೆಯಾಯಿತು.
ಆತ ಪೊಲೀಸ್ ನೇಮಕಾತಿ ಡ್ರೈವ್ಗೆ ಅರ್ಜಿ ಸಲ್ಲಿಸಿದ್ದ, ಅರ್ಜಿಯ ಅಪ್ಡೇಟ್ ಬಗ್ಗೆ ತಿಳಿಯಲು ಪೊಲೀಸ್ ಠಾಣೆಗೆ ಭೇಟಿ ನೀಡಿದ್ದ. ಆತನ ಗುರುತು ಪತ್ತೆಯಾದಂತೆ, ಎನ್ಕೋಬೋನನ್ನು ಬಂಧಿಸಲಾಯಿತು..