ಭಾರತ ಮತ್ತು ಪಾಕಿಸ್ತಾನ ಬೇರ್ಪಟ್ಟ ಸಮಯದಲ್ಲಿ ಬೇರ್ಪಟ್ಟ ಒಂದೇ ಕುಟುಂಬದ ಮಕ್ಕಳು ಬರೋಬ್ಬರಿ 75 ವರ್ಷಗಳ ಬಳಿಕ ಒಂದಾಗಿದ್ದಾರೆ.
ಕರ್ತಾರ್ಪುರದ ಗುರುದ್ವಾರ ದರ್ಬಾರ್ ಸಾಹಿಬ್ನಲ್ಲಿ ಪಾಕಿಸ್ತಾನದ ತನ್ನ ಮುಸ್ಲಿಂ ಸಹೋದರಿಯನ್ನು ಭೇಟಿಯಾದ ಜಲಂಧರ್ ಮೂಲದ ಸಿಖ್ ವ್ಯಕ್ತಿ ಅಮರ್ಜಿತ್ ಸಿಂಗ್ ಅವರ ಸಂತೋಷಕ್ಕೆ ಮಿತಿಯೇ ಇರಲಿಲ್ಲ.
ವಿಭಜನೆಯ ಸಮಯದಲ್ಲಿ ಅಮರ್ಜಿತ್ ಅವರ ಮುಸ್ಲಿಂ ಪೋಷಕರು ಪಾಕಿಸ್ತಾನಕ್ಕೆ ವಲಸೆ ಹೋದಾಗ ತಮ್ಮ ಸಹೋದರಿಯೊಂದಿಗೆ ಮಗನನ್ನು ಭಾರತದಲ್ಲಿ ಬಿಟ್ಟುಹೋಗಿದ್ದರು.
ಬುಧವಾರ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಕರ್ತಾರ್ಪುರದ ಗುರುದ್ವಾರ ದರ್ಬಾರ್ ಸಾಹಿಬ್ನಲ್ಲಿ ಗಾಲಿಕುರ್ಚಿಯಲ್ಲಿದ್ದ ಅಮರ್ಜಿತ್ ಸಿಂಗ್ ತಮ್ಮ ಸಹೋದರಿ ಕುಲ್ಸೂಮ್ ಅಖ್ತರ್ ಅವರೊಂದಿಗೆ ಭಾವನಾತ್ಮಕವಾಗಿ ಭೇಟಿಯಾದಾಗ ಅಲ್ಲಿದ್ದ ಎಲ್ಲರ ಕಣ್ಣುಗಳು ತೇವವಾದವು.
ಸಿಂಗ್ ತನ್ನ ಸಹೋದರಿಯನ್ನು ಭೇಟಿಯಾಗಲು ವೀಸಾದೊಂದಿಗೆ ವಾಘಾ ಗಡಿಯ ಮೂಲಕ ಪಾಕಿಸ್ತಾನಕ್ಕೆ ಬಂದಿದ್ದರು. 65ರ ಹರೆಯದ ಕುಲ್ಸೂಮ್ಗೆ ತನ್ನ ಅಣ್ಣನನ್ನು ನೋಡಿದ ನಂತರ ತನ್ನ ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಇಬ್ಬರೂ ಒಬ್ಬರನ್ನೊಬ್ಬರು ಅಪ್ಪಿಕೊಂಡು ಅಳುತ್ತಲೇ ಇದ್ದರು. ಆಕೆ ತನ್ನ ಸಹೋದರನನ್ನು ಭೇಟಿಯಾಗಲು ತನ್ನ ಮಗ ಶಹಜಾದ್ ಅಹ್ಮದ್ ಮತ್ತು ಇತರ ಕುಟುಂಬ ಸದಸ್ಯರೊಂದಿಗೆ ಫೈಸಲಾಬಾದ್ನ ತನ್ನ ತವರುಮನೆಯಿಂದ ಪ್ರಯಾಣ ಬೆಳೆಸಿದ್ದರು.
1947ರಲ್ಲಿ ಆಕೆಯ ಪೋಷಕರು ಜಲಂಧರ್ನಿಂದ ಪಾಕಿಸ್ತಾನಕ್ಕೆ ವಲಸೆ ಬಂದಿದ್ದು, ಕುಲ್ಸೂಮ್ ಪಾಕಿಸ್ತಾನದಲ್ಲಿ ಜನಿಸಿದರು. ಕಳೆದುಹೋದ ಸಹೋದರ ಮತ್ತು ಸಹೋದರಿಯ ಬಗ್ಗೆ ತಾಯಿಯ ಬಳಿ ಕೇಳುತ್ತಿದ್ದರು. ಕಾಣೆಯಾದ ಮಕ್ಕಳನ್ನು ನೆನಪಿಸಿಕೊಂಡಾಗಲೆಲ್ಲ ತಾಯಿ ಅಳುತ್ತಿದ್ದರು ಎಂದು ಹೇಳಿದ್ದಾರೆ.
ಕೆಲವು ವರ್ಷಗಳ ಹಿಂದೆ, ಆಕೆಯ ತಂದೆ ಸರ್ದಾರ್ ದಾರಾ ಸಿಂಗ್ ಸ್ನೇಹಿತ ಭಾರತದಿಂದ ಪಾಕಿಸ್ತಾನಕ್ಕೆ ಬಂದು ಆಕೆಯನ್ನು ಭೇಟಿಯಾದರು. ಈ ವೇಳೆ ಆಕೆಯ ತಾಯಿ ತನ್ನ ಮಗ – ಮಗಳ ಬಗ್ಗೆ ಹೇಳಿದ್ದರು. ಅವರ ಹಳ್ಳಿಯ ಹೆಸರು ಮತ್ತು ಅವರ ಮನೆಯ ಸ್ಥಳವನ್ನು ಸಹ ಅವರಿಗೆ ತಿಳಿಸಿದಳು.
ಸರ್ದಾರ್ ದಾರಾ ಸಿಂಗ್ ನಂತರ ಪಡವಾನ್ ಗ್ರಾಮದಲ್ಲಿರುವ ಆಕೆಯ ಮನೆಗೆ ಭೇಟಿ ನೀಡಿ ಮಗ ಜೀವಂತವಾಗಿದ್ದಾನೆ. ಆದರೆ ಮಗಳು ಮೃತಪಟ್ಟಿದ್ದಾಳೆಂದು ಮಾಹಿತಿ ನೀಡಿದ್ದರು.
1947ರಲ್ಲಿ ಸಿಖ್ ಕುಟುಂಬದಿಂದ ದತ್ತು ಪಡೆದ ಆಕೆಯ ಮಗನಿಗೆ ಅರ್ಮಜಿತ್ ಸಿಂಗ್ ಎಂದು ಹೆಸರಿಡಲಾಗಿತ್ತು. ಸಹೋದರನ ಮಾಹಿತಿಯನ್ನು ಪಡೆದ ನಂತರ, ಕುಲ್ಸೂಮ್ ಸಿಂಗ್ ಅವರೊಂದಿಗೆ ವಾಟ್ಸಾಪ್ನಲ್ಲಿ ಸಂಪರ್ಕ ಹೊಂದಿದ್ದು, ನಂತರ ಭೇಟಿಯಾಗಲು ನಿರ್ಧರಿಸಿದ್ದರು.
ತಮ್ಮ ನಿಜವಾದ ಪೋಷಕರು ಪಾಕಿಸ್ತಾನದಲ್ಲಿದ್ದಾರೆ ಎಂದು ತಿಳಿದಾಗ ತನಗೆ ಆಘಾತವಾಗಿದೆ ಎಂದು ಸಿಂಗ್ ಹೇಳಿದರು. ಆದರೆ, ತನ್ನ ಕುಟುಂಬದ ಜೊತೆಗೆ ಅನೇಕ ಕುಟುಂಬಗಳು ಬೇರ್ಪಟ್ಟಿವೆ ಎಂದು ಅರಿತು ಸಂತೈಸಿಕೊಂಡಿದ್ದರಂತೆ.
ಕರ್ತಾರ್ಪುರ ಕಾರಿಡಾರ್ ಕುಟುಂಬವನ್ನು ಮತ್ತೆ ಒಂದುಗೂಡಿಸುವುದು ಇದು ಎರಡನೇ ಪ್ರಕರಣ. ಮೇ ತಿಂಗಳಲ್ಲಿ, ಮುಸ್ಲಿಂ ದಂಪತಿಗಳಿಂದ ದತ್ತು ಪಡೆದು ಬೆಳೆದ ಸಿಖ್ ಕುಟುಂಬದಲ್ಲಿ ಜನಿಸಿದ ಮಹಿಳೆಯೊಬ್ಬರು ಕರ್ತಾರ್ಪುರದಲ್ಲಿ ಭಾರತದ ಸಹೋದರರನ್ನು ಭೇಟಿಯಾಗಿದ್ದರು.