ಕೋವಿಡ್ ಲಸಿಕೆ ಕಾರಣಕ್ಕೆ ಪ್ರಖ್ಯಾತರಾದ ಆದರ್ ಪೂನಾವಾಲ ಅವರ ಹೆಸರಿನಲ್ಲಿ ಸೈಬರ್ ವಂಚಕರು ಒಂದು ಕೋಟಿ ರೂ. ವಂಚನೆ ನಡೆಸಿರುವ ಪ್ರಸಂಗ ನಡೆದಿದೆ.
ಪುಣೆ ಮೂಲದ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಕಂಪನಿಯ ಮುಖ್ಯಸ್ಥನೆಂದು ಹೇಳಿಕೊಂಡು ಅಪರಿಚಿತ ಸೈಬರ್ ವಂಚಕರು 1 ಕೋಟಿ ರೂ.ವನ್ನು ವಿವಿಧ ಖಾತೆಗಳಿಗೆ ಹಣ ವರ್ಗಾವಣೆ ಮಾಡುವಂತೆ ಅದರ ನಿರ್ದೇಶಕರೊಬ್ಬರಿಗೆ ವಾಟ್ಸಾಪ್ ಸಂದೇಶವನ್ನು ಕಳುಹಿಸಿದ್ದರು.
ಆ ಪ್ರಕಾರ ಕಂಪನಿಯ ಖಾತೆಯಿಂದ 1,01,01,554 ರೂ.ಗಳನ್ನು ಆ ಖಾತೆಗಳಿಗೆ ವರ್ಗಾಯಿಸಲಾಗಿತ್ತು. ಆದರೆ ಪೂನಾವಾಲಾ ಹಣ ವರ್ಗಾವಣೆ ಕೋರಿ ಅಂತಹ ಯಾವುದೇ ಸಂದೇಶವನ್ನು ಕಳುಹಿಸಿಲ್ಲ ಎಂದು ಕಂಪನಿಯ ಅಧಿಕಾರಿಗಳು ನಂತರ ತಿಳಿದುಕೊಂಡು ಪೊಲೀಸರನ್ನು ಸಂಪರ್ಕಿಸಿದ್ದಾರೆ.
ಕಂಪನಿಯ ಫೈನಾನ್ಸ್ ಮ್ಯಾನೇಜರ್ ಸಾಗರ್ ಕಿತ್ತೂರ ಅವರ ದೂರಿನ ಆಧಾರದ ಮೇಲೆ ಶುಕ್ರವಾರ ಬಂಡ್ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೆಪ್ಟೆಂಬರ್ 7ರಂದು ಮಧ್ಯಾಹ್ನ 1.35 ರಿಂದ ಸೆಪ್ಟೆಂಬರ್ 8 ರ ಮಧ್ಯಾಹ್ನ 2.30 ರ ನಡುವೆ ಈ ಪ್ರಕರಣ ನಡೆದಿದೆ.