ಅನಿರೀಕ್ಷಿತವಾಗಿ ಆಗಮಿಸಿದ ಅತಿಥಿಗಳಿಂದಾಗಿ ಫುಟ್ಬಾಲ್ ಪಂದ್ಯಾಟವನ್ನು ಅರ್ಧಕ್ಕೆ ನಿಲ್ಲಿಸಬೇಕಾಗಿ ಬಂದ ಪ್ರಸಂಗ ಯುಎಸ್ನ ವಾಷಿಂಗ್ಟನ್ನಲ್ಲಿ ನಡೆದಿದೆ.
ಪಂದ್ಯವನ್ನು ಅಡ್ಡಿಪಡಿಸಲು ಬಯಸಿದ್ದು ಯಾವುದೇ ಕುಚೇಷ್ಟೆ ಹೊಂದಿದ ವ್ಯಕ್ತಿಗಳಲ್ಲ, ಜಿಂಕೆಗಳ ಹಿಂಡು.
ಶಾಲಾ ಮಕ್ಕಳು ಫುಟ್ಬಾಲ್ ಆಡುವಾಗ ಜಿಂಕೆಗಳ ಹಿಂಡು ಮೈದಾನಕ್ಕೆ ನುಗ್ಗಿದೆ.
ಮಕ್ಕಳೆಲ್ಲ ಆಶ್ಚರ್ಯದಿಂದ ಜಿಂಕೆಗಳ ಓಡಾಟ ನೋಡುತ್ತಿದ್ದು, ಚೀತ್ಕಾರ ಸಹ ಕೇಳಿಬರುತ್ತದೆ. ಆಟಗಾರರೆಲ್ಲ ತಾವಿದ್ದಲ್ಲೇ ನಿಂತು ಜಿಂಕೆಗಳು ಓಡಾಡಲು ಬಿಟ್ಟಿದ್ದರು. ಜಿಂಕೆಗಳೋ ಗಾಬರಿಯಿಂದ ಎಲ್ಲಿಗೆ ಹೋಗಬೇಕು ತಿಳಿಯದೇ ಪರದಾಡಿದವು.
ಮೂರು ಜಿಂಕೆಗಳ ಕುಟುಂಬ ಅಲ್ಲಿ ಸಾಕಷ್ಟು ಸಮಯವನ್ನು ಕಳೆದವು. ಅಲ್ಲಿವರೆಗೂ ಆಟಕ್ಕೆ ಅಡಚಣೆಯಾಗಿತ್ತು.
ಆಟಗಾರರು ತಮ್ಮ ಪಂದ್ಯವನ್ನು ಪುನರಾರಂಭಿಸಲು ಕಾಯುತ್ತಿರುವಾಗ ಜಿಂಕೆ ಸಂತೋಷದಿಂದ ಜಿಗಿಯುತ್ತಾ ಮೈದಾನದಾದ್ಯಂತ ಓಡುತ್ತಿರುವುದನ್ನು ಸಹ ವಿಡಿಯೋದಲ್ಲಿ ಕಾಣಬಹುದು.
ಈ ಘಟನೆಯನ್ನು ಕ್ರಿಸ್ಟಿ ಆಚಿರ್ಬೆಕ್ ಎಂಬ ಪ್ರೇಕ್ಷಕರು ಚಿತ್ರೀಕರಿಸಿದ್ದಾರೆ. ಆಟ ಮೂರನೇ ಕ್ವಾರ್ಟರ್ನಲ್ಲಿದ್ದಾಗ ಜಿಂಕೆ ಮತ್ತು ಎರಡು ಮರಿ ಜಿಂಕೆಗಳು ಮೈದಾನಕ್ಕೆ ಪ್ರವೇಶಿಸಿದ್ದವು ಎಂದು ಆಚಿರ್ಬೆಕ್ ಮಾಹಿತಿ ನೀಡಿದ್ದಾರೆ.
ಸ್ಥಳದಲ್ಲಿದ್ದ ರೆಫರಿಗಳು ಮತ್ತು ತರಬೇತುದಾರರು ಜಿಂಕೆಯನ್ನು ಮೈದಾನದಿಂದ ಹೊರತರಲು ಪ್ರಯತ್ನಿಸಿದರು. ಆದರೆ ಒಂದು ಜಿಂಕೆ ಹೊರ ಹೋಗಲು ಬಯಸಲಿಲ್ಲ.