ಓಣಂ ಅಂಗವಾಗಿ ರಾಜ ಮಹಾಬಲಿಯಂತೆ ವೇಷ ಧರಿಸಿ ಕೆಲಸಕ್ಕೆ ಬಂದ ಉದ್ಯೋಗಿಯೊಬ್ಬರು ಗ್ರಾಹಕರನ್ನು ಆಶ್ಚರ್ಯಗೊಳಿಸಿದರು.
ಕೇರಳದ ತಲಶ್ಶೇರಿಯಲ್ಲಿರುವ ಎಸ್.ಬಿ.ಐ. ಶಾಖೆಯಲ್ಲಿ ನಡೆದ ಈ ಘಟನೆ ಟ್ವಿಟರ್ ಬಳಕೆದಾರರಲ್ಲಿ ನಗು ತರಿಸಿದೆ.
ಘಟನೆಯ ವಿಡಿಯೋದಲ್ಲಿ ಆ ಬ್ಯಾಂಕ್ ಉದ್ಯೋಗಿ ರಾಜನ ಉಡುಪಿನಲ್ಲಿಯೇ ಇದ್ದು ತನ್ನ ಗ್ರಾಹಕರ ಅಗತ್ಯತೆಗಳನ್ನು ಪೂರೈಸುವುದನ್ನು ಕಾಣಬಹುದು.
ಟ್ವಿಟ್ಟರ್ ಬಳಕೆದಾರ ನಿಕ್ಸನ್ ಜೋಸೆಫ್ ವಿಡಿಯೊವನ್ನು ಹಂಚಿಕೊಂಡು, ಎಸ್.ಬಿ.ಐ. ತಲಶ್ಶೇರಿ ಸಿಬ್ಬಂದಿ ಪೌರಾಣಿಕ ರಾಜ ಮಹಾಬಲಿಯಂತೆ ವೇಷಧರಿಸಿ ಕೌಂಟರ್ನಲ್ಲಿ ಸೇವೆಗಳನ್ನು ವಿತರಿಸುತ್ತಿದ್ದಾರೆ, ಅವರ ಚೈತನ್ಯ ಮತ್ತು ಉತ್ಸಾಹಕ್ಕೆ ವಂದನೆಗಳು ಎಂದು ವಿವರಿಸಿದ್ದಾರೆ.
ನೆಟ್ಟಿಗರು ಆ ಉದ್ಯೋಗಿಯ ಉತ್ಸಾಹವನ್ನು ಮೆಚ್ಚಿ ಶ್ಲಾಘಿಸಿದರು. ಈ ಸಿಬ್ಬಂದಿ ನಿಜವಾಗಿಯೂ ಧೈರ್ಯಶಾಲಿ ಎಂದು ಒಬ್ಬರು ಕಾಮೆಂಟ್ ಮಾಡಿದರೆ, “ಅದ್ಭುತ ಮತ್ತು ಶ್ಲಾಘನೀಯ….. ಚೆಕ್ ಅಥವಾ ಡೆಬಿಟ್ ಅಕೌಂಟ್ ಇಲ್ಲದೆಯೇ ಪಾವತಿ ಮಾಡಿದರೆ ಅವರ ಪ್ರಜೆಗಳು ಸಂತೋಷಪಡುತ್ತಾರೆ…. ಎಂದು ಇನ್ನೊಬ್ಬರು ಹಾಸ್ಯಮಯ ಕಾಮೆಂಟ್ ಮಾಡಿದ್ದಾರೆ.
ಓಣಂ ಕೇರಳದ ಅತಿದೊಡ್ಡ ಹಬ್ಬಗಳಲ್ಲಿ ಒಂದಾಗಿದೆ. ದೇಶಾದ್ಯಂತ ಮತ್ತು ಪ್ರಪಂಚದಾದ್ಯಂತದ ಮಲಯಾಳಿಗಳು ಹಬ್ಬವನ್ನು ಬಹಳ ವೈಭವದಿಂದ ಆಚರಿಸುತ್ತಾರೆ. ಹಬ್ಬವು 10 ದಿನ ಆಚರಿಸಲಾಗುತ್ತದೆ. ಈ ವರ್ಷ ಆಗಸ್ಟ್ 30 ರಂದು ಪ್ರಾರಂಭವಾಯಿತು.