ಸೌತೆಕಾಯಿ ಸಾಮಾನ್ಯವಾಗಿ ಬಳಸುವ ತರಕಾರಿಗಳಲ್ಲೊಂದು. ಅದರ ಅಳತೆಯ ಪರಿಚಯವೂ ಎಲ್ಲರಿಗೂ ಇದ್ದೇ ಇರುತ್ತದೆ. ಹೆಚ್ಚೆಂದರೆ ಒಂದು ಮೊಣಕೈ ಉದ್ದ ಇರಬಹುದು. ಆದರೆ ಇಲ್ಲೊಬ್ಬರು 113 ಸೆಂ.ಮೀಟರ್ ಸೌತೆಕಾಯಿ ಬೆಳೆಸಿ ವಿಶ್ವದಾಖಲೆ ಬರೆದಿದ್ದಾರೆ.
ಅಮೆರಿಕಾದ ಸೌತಾಂಪ್ಟನ್ ನಿವಾಸಿ, ಪೋಲೆಂಡ್ ಮೂಲದ ಸೆಬಾಸ್ಟಿಯನ್ ಸುಸ್ಕಿ ಅವರು ವಿಶ್ವದ ಅತಿ ಉದ್ದದ ಸೌತೆಕಾಯಿ ಬೆಳೆದಿದ್ದಾರೆ. ಇದು 113.4 ಸೆಂಟಿಮೀಟರ್ಗಳಿದ್ದು, ಗಿನ್ನಿಸ್ ವರ್ಲ್ಡ್ ರೆಕಾರ್ಡ್ನಲ್ಲಿ ತಮ್ಮ ಹೆಸರು ದಾಖಲಿಸಿದ್ದಾರೆ.
ಈ ಹಿಂದೆ ಅವರದೆ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿ ಹಾಕಿದರು.
ಯುರೋಪಿಯನ್ ಜೈಂಟ್ ವೆಜಿಟಬಲ್ ಗ್ರೋವರ್ಸ್ ಅಸೋಸಿಯೇಷನ್ನಲ್ಲಿ ಕಾರ್ಯನಿರ್ವಹಿಸುವ ಸೆಬಾಸ್ಟಿಯನ್ ಹಲವಾರು ರಾಷ್ಟ್ರೀಯ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ಸೆಬಾಸ್ಟಿಯನ್ ಪ್ರಕಾರ, ದೊಡ್ಡ ಸೌತೆಕಾಯಿಗಳನ್ನು ಬೆಳೆಯುವುದು ಅಪಾಯಕಾರಿ ವ್ಯವಹಾರ. ಬೇಗನೆ ಕತ್ತರಿಸಿದರೆ, ರೆಕಾರ್ಡ್ ಬ್ರೇಕರ್ ಆಗಬಹುದು. ಆದರೆ ಹೆಚ್ಚು ಸಮಯ ಬಿಟ್ಟರೆ ಅಪಾಯ ಎದುರಾಗುತ್ತದೆ. ಸೌತೆಕಾಯಿ ಬೆಳೆದಂತೆ ಕೊಳೆಯುವ ಅಪಾಯವಿದೆ ಎಂದಿದ್ದಾರೆ.
ಸೌತೆಕಾಯಿಯ ಬೆಳವಣಿಗೆಯ ವೇಳೆ ಅವರು ಆಸ್ಪತ್ರೆಗೆ ಸೇರಿದ್ದರಂತೆ, ಅವರ ಅನುಪಸ್ಥಿತಿಯಲ್ಲಿ ಪತ್ನಿ ರೆನಾಟಾ ಸಹಾಯಕ್ಕೆ ಬಂದು ತರಕಾರಿಯನ್ನು ನೋಡಿಕೊಂಡರಂತೆ
ವಿಶ್ವದ ಅತಿ ಉದ್ದದ ಸೌತೆಕಾಯಿ ಬೆಳೆಯುವ ಮೊದಲು ಸೆಬಾಸ್ಟಿಯನ್ ಸೌತೆಕಾಯಿ ಬೀಜದ ಬಗ್ಗೆ ಹುಡುಕಾಡಿದ್ದರು.ಯುಕೆ, ಜರ್ಮನಿ, ಪೋಲೆಂಡ್ ಸುತ್ತಿ ಮತ್ತೆ ಯುಕೆಗೆ ಹಿಂತಿರುಗಿ ನಿರ್ದಿಷ್ಟ ಸೌತೆ ಬೀಜವನ್ನು ಕಂಡುಕೊಂಡರು.
ಈ ಬೀಜಗಳು ಪೋಲೆಂಡ್ನ ಬೆಳೆಗಾರರಾದ ಪಿಯೋಟರ್ ಹೊಲೆವಾ ಅವರಿಂದ ನನಗೆ ಬಂದಿವೆ, ಅವರ ಸೌತೆಕಾಯಿಗಳು 99 ಸೆಂಟಿಮೀಟರ್ ಉದ್ದವನ್ನು ತಲುಪಬಹುದು ಎಂದು ಸೆಬಾಸ್ಟಿಯನ್ ಹೇಳಿಕೊಂಡಿದ್ದಾರೆ.