ಬೆಂಗಳೂರು: ಅಡುಗೆ ಎಣ್ಣೆ, ಇಂಧನ, ಗ್ಯಾಸ್ ಸಿಲಿಂಡರ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಹೊತ್ತಲ್ಲೇ ಜನಸಾಮಾನ್ಯರಿಗೆ ಮತ್ತೊಂದು ಶಾಕ್ ಎದುರಾಗಿದೆ. ನಂದಿನಿ ಹಾಲಿನ ದರ ಕೂಡ ಶೀಘ್ರವೇ ಏರಿಕೆಯಾಗಲಿದೆ ಎಂದು ಹೇಳಲಾಗಿದೆ.
ಕರ್ನಾಟಕ ಹಾಲು ಒಕ್ಕೂಟದ ನಿರ್ದೇಶಕ ಸತೀಶ್ ಅವರು, 14 ಜಿಲ್ಲೆಗಳ ಹಾಲು ಒಕ್ಕೂಟದಿಂದ ಹಾಲಿನ ದರ ಹೆಚ್ಚಳಕ್ಕೆ ಒತ್ತಾಯಿಸುತ್ತಿದ್ದು, ದರ ಹೆಚ್ಚಳ ಮಾಡಿದ್ದಲ್ಲಿ ಅದನ್ನು ರೈತರಿಗೆ ನೀಡಲಾಗುವುದು ಎಂದು ಹೇಳಿದ್ದಾರೆ.
ಹಾಲಿನ ದರ ಹೆಚ್ಚಳಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದು, ಸಾಧಕ ಬಾಧಕ ನೋಡಿಕೊಂಡು ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದಾರೆ. ಪ್ರತಿ ಲೀಟರ್ ಹಾಲಿನ ಪಾಕೆಟ್ ದರ 37 ಇದ್ದು, 3 ರೂಪಾಯಿ ಹೆಚ್ಚಳ ಮಾಡಿದರೆ 40 ರೂಪಾಯಿ ಆಗಲಿದೆ. ಗ್ರಾಹಕರಿಗೆ ಸಣ್ಣ ಹೊರೆಯಾಗಲಿದ್ದು, ಆ ದರವನ್ನು ಹಾಲು ಉತ್ಪಾದಕರಿಗೆ ನೀಡಲಾಗುವುದು ಎಂದು ತಿಳಿಸಿದ್ದಾರೆ.