ಆಂಧ್ರಪ್ರದೇಶದ ಮಹಿಳೆಯೊಬ್ಬಳ ಮೂಗಿನಲ್ಲಿದ್ದ 150 ಹುಳಗಳನ್ನು ವೈದ್ಯರು ಹೊರತೆಗೆದಿದ್ದಾರೆ. ಗುಂಟೂರು ಜಿಲ್ಲೆಯ 50 ವರ್ಷದ ಈ ಮಹಿಳೆಗೆ ಆರು ತಿಂಗಳ ಹಿಂದೆ ಕೋವಿಡ್ ಸೋಂಕು ತಗುಲಿತ್ತು. ಕೊರೊನಾ ಸೋಂಕು ನಂತರ ಮ್ಯೂಕಾರ್ಮೈಕೋಸಿಸ್ಗೆ ಕಾರಣವಾಯಿತು. ಇದರಿಂದಾಗಿ ಆಕೆಯ ಬಲಗಣ್ಣನ್ನು ತೆಗೆದುಹಾಕಲಾಯಿತು. ಈ ಪ್ರಕ್ರಿಯೆಯಿಂದಾಗಿ ಆಕೆ ದೇಹದಲ್ಲಿನ ಸಂವೇದನೆಯನ್ನೇ ಕಳೆದುಕೊಂಡಿದ್ದಳು.
ಸೊಳ್ಳೆ ಅಥವಾ ಹೌಸ್ ಫ್ಲೈ ಚರ್ಮದ ಮೇಲೆ ಕುಳಿತಾಗ, ಕಚ್ಚಿದಾಗ ನಾವು ಅದನ್ನು ಹೊಡೆದೋಡಿಸುತ್ತೇವೆ. ಆದ್ರೆ ಮಹಿಳೆಯಲ್ಲಿ ಸಂವೇದನೆಯೇ ಇಲ್ಲದಿದ್ದರಿಂದ ಸೊಳ್ಳೆಗಳು ಮೂಗನ್ನು ಹೊಕ್ಕಿ ಅಲ್ಲೇ ಮೊಟ್ಟೆ ಇಟ್ಟಿವೆ. ಅದು ಮಹಿಳೆಯ ಅರಿವಿಗೇ ಬಂದಿಲ್ಲ. ಪರಿಣಾಮ ಮೊಟ್ಟೆ ಒಡೆದು ಹುಳಗಳು ಹೊರಬಿದ್ದಿವೆ. ಆಗ ಮಹಿಳೆಯ ಆರೋಗ್ಯ ತೀವ್ರ ಹದಗೆಟ್ಟಿದೆ.
ಆಕೆ ಅರೆ ಕೋಮಾ ಸ್ಥಿತಿಯಲ್ಲಿದ್ದು, ಅವಳನ್ನು ಸೆಂಚುರಿ ಆಸ್ಪತ್ರೆಗೆ ಕರೆತರಲಾಯ್ತು. ಈ ವೇಳೆ ಮೂಗಿನಲ್ಲಿ ಹುಳಗಳಿರುವುದು ಪತ್ತೆಯಾಗಿದೆ. ವೈದ್ಯರು ಮೂಗಿನಲ್ಲಿದ್ದ 150 ಹುಳಗಳನ್ನು ಹೊರತೆಗೆದಿದ್ದಾರೆ. ಆಕೆಗೆ ಸಕ್ಕರೆ ಕಾಯಿಲೆ ಮತ್ತು ಮೂತ್ರಪಿಂಡದ ಸಮಸ್ಯೆಯೂ ಇದೆ.
ಹುಳಗಳು ಮೆದುಳಿನ ಕೆಳಭಾಗದಲ್ಲಿರುವುದು ಪರೀಕ್ಷೆಯಲ್ಲಿ ಪತ್ತೆಯಾಯಿತು. ಮೆದುಳಿಗೆ ಸಮೀಪವಿರುವ ಆಕೆಯ ಮುಖದ ಮೂಳೆಗಳು ಸಂಪೂರ್ಣವಾಗಿ ಸೋಂಕಿಗೆ ಒಳಗಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ. ಚಿಕಿತ್ಸೆಯ ಬಳಿಕ ರೋಗಿಯು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಆಕೆಯ ಎಡಗಣ್ಣಿನ ದೃಷ್ಟಿ ಸಾಮಾನ್ಯ ಸ್ಥಿತಿಯಲ್ಲಿದೆ, ನಡೆದಾಡುವ ಸ್ಥಿತಿಗೆ ತಲುಪಿರೋ ಮಹಿಳೆ, ಮನೆಗೆಲಸ ಸಹ ಮಾಡುತ್ತಿದ್ದಾಳೆ.