ತನ್ನ ಜಾಹೀರಾತಿನಲ್ಲಿ ಪ್ರಸಿದ್ಧ ಮಹಾಕಾಲ್ ದೇವಾಲಯವನ್ನು ಅಪಹಾಸ್ಯ ಮಾಡಲಾಗಿದೆ ಎಂಬ ಕಾರಣಕ್ಕೆ ತೀವ್ರ ಆಕ್ಷೇಪ ಬಂದ ಹಿನ್ನೆಲೆಯಲ್ಲಿ ಜೊಮಾಟೊ ಕ್ಷಮೆಯಾಚಿಸಿದೆ.
ಹೃತಿಕ್ ರೋಷನ್ ಅವರು ಪ್ರಮುಖವಾಗಿ ಕಾಣಿಸುವ ಇತ್ತೀಚಿನ ಜಾಹೀರಾತಿನಲ್ಲಿ ಹಿಂದೂ ಭಾವನೆಗಳನ್ನು ಘಾಸಿಗೊಳಿಸಿದೆ ಎಂದು ಚರ್ಚೆಯಾಗಿತ್ತು.
“ಥಾಲಿ ಖಾನೆ ಕಾ ಮನ್ ಥಾ, ಮಹಾಕಾಲ್ ಸೇ ಮಂಗಾ ಲಿಯಾ (ಊಟದ ತಟ್ಟೆಯನ್ನು ಹೊಂದಲು ಬಯಸಿದ್ದೆ, ಆದ್ದರಿಂದ ನಾನು ಅದನ್ನು ಮಹಾಕಾಲ್ನಿಂದ ಆರ್ಡರ್ ಮಾಡಿದ್ದೇನೆ)” ಎಂದು ರೋಷನ್ ಹೇಳುವುದನ್ನು ಜಾಹೀರಾತಿನಲ್ಲಿ ಕೇಳಬಹುದು.
ಮಹಾಕಾಲ್ ದೇವಸ್ಥಾನ ದೇಶದ 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ. ಇದು ಪ್ರಪಂಚದಾದ್ಯಂತದ ಭಕ್ತರನ್ನು ಆಕರ್ಷಿಸುತ್ತದೆ.
ಸಾಮಾಜಿಕ ಮಾಧ್ಯಮದಲ್ಲಿ ಜೊಮಾಟೋ ಅಪ್ಲಿಕೇಶನ್ ಎದುರಿಸಿದ ಭಾರೀ ಹಿನ್ನಡೆಯ ನಂತರ, ಕ್ಷಮೆಯಾಚಿಸಿ ಸ್ಪಷ್ಟಿಕರಣವನ್ನು ನೀಡಿದೆ. ಮಹಾಕಾಲ್ ದೇವಸ್ಥಾನದ ಅರ್ಚಕರಿಂದಲೂ ದೂರುಗಳು ಸಹ ಬಂದಿದ್ದವು.
ಕ್ಷಮಾಪಣೆಯಲ್ಲಿ, ಸಂಸ್ಥೆಯು ಉಜ್ಜಯಿನಿಯ ಜನರ ಭಾವನೆಗಳನ್ನು ಗೌರವಿಸುತ್ತದೆ ಎಂದು ಉಲ್ಲೇಖಿಸಿದೆ. ಆ ಜಾಹೀರಾತು ಇನ್ನು ಮುಂದೆ ಬಳಸುವುದಿಲ್ಲ ಎಂದು ಸ್ಪಷ್ಟನೆ ನೀಡಿದೆ.
“ನಾವು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇವೆ, ನಂಬಿಕೆ, ಭಾವನೆಗಳನ್ನು ನೋಯಿಸುವ ಉದ್ದೇಶವಿಲ್ಲʼʼ ಎಂದು ಜೊಮಾಟೊ ಹೇಳಿಕೊಂಡಿದೆ.
ಈ ಎಲ್ಲಾ ಪ್ರಯತ್ನಗಳ ಹೊರತಾಗಿಯೂ, ಜನರ ಕೋಪವು ಕಡಿಮೆಯಾಗುತ್ತಿಲ್ಲ. ಜೊಮಾಟೋ ಅಪ್ಲಿಕೇಶನ್ ಇನ್ನೂ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ ಎದುರಿಸುತ್ತಿದೆ.
ಮಹಾಕಾಲೇಶ್ವರ ದೇವಸ್ಥಾನದ ಹಿಂದೂ ಸಂತರು ಬಾಲಿವುಡ್ ಸೂಪರ್ಸ್ಟಾರ್ ಹೃತಿಕ್ ರೋಷನ್ ಅವರನ್ನು ಒಳಗೊಂಡಿರುವ ಜಾಹೀರಾತನ್ನು ಖಂಡಿಸಿದ್ದಾರೆ.