ಸಾಮಾನ್ಯವಾಗಿ ಮೆಟ್ರೋ ಸಾಗುವ ಮಾರ್ಗದ ಅಕ್ಕಪಕ್ಕದಲ್ಲಿ ಜನರ ಓಡಾಟಕ್ಕೆ ಅವಕಾಶ ಇರುವುದಿಲ್ಲ. ವಿದ್ಯುತ್ ಅಪಾಯ ಮತ್ತು ಮೆಟ್ರೋದ ವೇಗ ಇದಕ್ಕೆ ಕಾರಣ. ಆ ಜಾಗವನ್ನು ಓಡಾಟ ನಿಷೇಧ ಎಂದೇ ಘೋಷಿಸಿ ನಿರ್ಬಂಧಿಸಲಾಗಿರುತ್ತದೆ. ಅಂಥದ್ದರಲ್ಲಿ ವ್ಯಕ್ತಿಯೊಬ್ಬ ನಡೆದುಕೊಂಡು ಹೋಗುವುದನ್ನು ಕಂಡ ಜನರು ಗಾಬರಿಗೊಂಡ ಪ್ರಸಂಗ ದೆಹಲಿಯಲ್ಲಿ ನಡೆದಿದೆ. ವೈರಲ್ ಆದ ವಿಡಿಯೊ ಕೂಡ 11 ಮಿಲಿಯನ್ ವೀಕ್ಷಣೆ ಕಂಡಿದೆ.
ಪಶ್ಚಿಮ ದೆಹಲಿಯ ನಂಗ್ಲೋಯ್ ಮೆಟ್ರೋ ನಿಲ್ದಾಣದ ಹಳಿಗಳ ಮೇಲೆ ಒಬ್ಬ ವ್ಯಕ್ತಿ ನಡೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಅದೇ ರೀತಿಯ ವಿಡಿಯೊವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳಲಾಗಿದೆ.
ಕಿರು ವಿಡಿಯೋ ಕ್ಲಿಪ್ನಲ್ಲಿ, ಒಬ್ಬ ವ್ಯಕ್ತಿ ನಂಗ್ಲೋಯ್ನ ಮೆಟ್ರೋ ನಿಲ್ದಾಣದ ಹಳಿಗಳ ಮೇಲೆ ನಡೆಯುತ್ತಿರುವುದು, ಕೆಳಗೆ ಜನರ ದೊಡ್ಡ ಗುಂಪೊಂದು ಜೋರಾಗಿ ಕೂಗುವುದು ಮತ್ತು ಶಿಳ್ಳೆ ಹೊಡೆಯುವುದನ್ನು ಕಾಣಬಹುದು. ಆ ವ್ಯಕ್ತಿ ಜನರ ಕೂಗಿಗೆ ಸ್ಪಂದಿಸದೇ ನಿರ್ಲಕ್ಷಿಸಿ ಸಾಗುವುದು ಕಾಣಿಸುತ್ತದೆ.
ವಿಡಿಯೊವು ತ್ವರಿತವಾಗಿ ಹೆಚ್ಚಿನ ಜನರ ಗಮನ ಸೆಳೆಯಿತು. ಸಾವಿರಾರು ನೆಟ್ಟಿಗರು ಕಾಮೆಂಟ್ ಮಾಡಿದ್ದು ಕೆಲವರು ಆತಂಕ ವ್ಯಕ್ತಪಡಿಸಿದರೆ, ಮತ್ತೆ ಕೆಲವರು ಹಾಸ್ಯ ಮಾಡಿದ್ದಾರೆ. ಒಬ್ಬರಂತೂ “ಊಟದ ನಂತರ ಮಧ್ಯಾಹ್ನದ ನಡಿಗೆ” ಎಂದು ಕಾಮೆಂಟ್ ಮಾಡಿದ್ದಾರೆ.