ಬೆಂಗಳೂರು ಪೊಲೀಸರು ನಡೆಸಿರುವ ಮಹತ್ವದ ಕಾರ್ಯಾಚರಣೆಯಲ್ಲಿ ಡ್ರಗ್ಸ್ ದಂಧೆಕೋರರನ್ನು ಬಂಧಿಸಿದ್ದು, ವಿಚಾರಣೆ ವೇಳೆ ಬೆಚ್ಚಿ ಬೀಳಿಸುವ ಸಂಗತಿ ಬಹಿರಂಗವಾಗಿದೆ. ಡಾರ್ಕ್ ನೆಟ್ ಮೂಲಕ ಮಾದಕ ದ್ರವ್ಯ ತರಿಸಿಕೊಳ್ಳುತ್ತಿದ್ದ ಆರೋಪಿಗಳು ಇದನ್ನು ಕೊರಿಯರ್ ಮೂಲಕ ತಮ್ಮ ಗ್ರಾಹಕರಿಗೆ ತಲುಪಿಸುತ್ತಿರುವುದು ಗೊತ್ತಾಗಿದೆ.
ಆರೋಪಿಗಳಿಂದ ಎಂಡಿಎಂಎ ಕ್ರಿಸ್ಟಲ್ಸ್, ಎಂಡಿಎಂಎ ಪಿಲ್ಸ್, ಎಲ್ ಎಸ್ ಡಿ ಸ್ಪಾಟ್ಸ್, ಕೊಕೇನ್ ಮತ್ತು ಹಶೀಶ್ ಸೇರಿದಂತೆ ಹಲವು ವಿಧದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದ್ದು, ಇವುಗಳ ಮೌಲ್ಯ ಎರಡು ಕೋಟಿ ರೂಪಾಯಿಗಳೆಂದು ತಿಳಿದುಬಂದಿದೆ. ಒಟ್ಟು ಐದು ಮಂದಿ ಆರೋಪಿಗಳು ದೆಹಲಿ ಹಾಗೂ ಬಿಹಾರದಿಂದ ಈ ದಂಧೆಯಲ್ಲಿ ತೊಡಗಿದ್ದರು ಎನ್ನಲಾಗಿದೆ.
ನಿರುದ್ಯೋಗಿ ಯುವಕರನ್ನು ಜಾಹೀರಾತುಗಳ ಮೂಲಕ ಉದ್ಯೋಗದ ಆಮಿಷವೊಡ್ಡಿ ಸೆಳೆಯುತ್ತಿದ್ದ ಆರೋಪಿಗಳು ತಮ್ಮ ಗ್ರಾಹಕರಿಗೆ ಡ್ರಗ್ಸ್ ಪೂರೈಸಲು ಇವರಗಳನ್ನು ಬಳಸಿಕೊಳ್ಳುತ್ತಿದ್ದರು. ಬೆಂಗಳೂರು ಪಿಜಿಗಳಲ್ಲಿ ಈ ಯುವಕರನ್ನು ಆರೋಪಿಗಳು ಇಟ್ಟಿದ್ದು, ಮಾಸಿಕ 50,000 ವೇತನ ನೀಡುತ್ತಿದ್ದರು ಎಂದು ಮೂಲಗಳು ತಿಳಿಸಿವೆ.