ಜೆಮ್ಸ್ ಯಾರಿಗೆ ಗೊತ್ತಿಲ್ಲ ಹೇಳಿ. ಮಕ್ಕಳಿಗೆ ಜೆಮ್ಸ್ ಇಷ್ಟ, ಮಕ್ಕಳಿಗಾಗಿ ಜೆಮ್ಸ್ ಖರೀದಿಸುವ ಪೋಷಕರಿಗೂ ಅದರ ಅರಿವಿದೆ. ಆದರೆ ಇದರದ್ದೊಂದು ಕೋರ್ಟ್ ವ್ಯಾಜ್ಯ ಬಹಳ ರೋಚಕವಾಗಿದೆ.
ಈ ಹಿಂದೆ ಕ್ಯಾಡ್ಬರಿ ಇಂಡಿಯಾ ಲಿಮಿಟೆಡ್ ಎಂದು ಕರೆಯಲ್ಪಡುವ ಮೊಂಡೆಲೆಜ್ ಇಂಡಿಯಾ ಫುಡ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ನೀರಜ್ ಫುಡ್ ಪ್ರಾಡಕ್ಟ್ ನಡುವಿನ ದೀರ್ಘಾವಧಿಯ ಟ್ರೇಡ್ಮಾರ್ಕ್ ಉಲ್ಲಂಘನೆ ವಿವಾದ ಕುರಿತಂತೆ ದೆಹಲಿ ಹೈಕೋರ್ಟ್ ಗುರುವಾರ ತನ್ನ ತೀರ್ಪು ನೀಡಿದೆ.
ಮೊಂಡೆಲೆಜ್ ಪರವಾಗಿ ತೀರ್ಪು ನೀಡಿದ ನ್ಯಾಯಾಲಯವು, ಕ್ಯಾಡ್ಬರಿಯ ಟ್ರೇಡ್ಮಾರ್ಕ್ “ಜೆಮ್ಸ್’ ನ ಹಕ್ಕುಸ್ವಾಮ್ಯವನ್ನು ಉಲ್ಲಂಘಿಸಿದ್ದಕ್ಕಾಗಿ ನೀರಜ್ ಫುಡ್ ಪ್ರಾಡಕ್ಸ್ಗೆ ಸುಮಾರು 16 ಲಕ್ಷ ರೂಪಾಯಿ ದಂಡವನ್ನು ಪಾವತಿಸುವಂತೆ ನಿರ್ದೇಶಿಸಿದೆ.
2005ರಲ್ಲಿ ಮೊಂಡೆಲೆಜ್ ಇಂಡಿಯಾ ಫುಡ್ಸ್ ಪ್ರೈವೇಟ್ ಲಿಮಿಟೆಡ್ ಟ್ರೇಡ್ಮಾರ್ಕ್ ಉಲ್ಲಂಘನೆಯ ಮೊಕದ್ದಮೆ ಹೂಡಿತು. ನೀರಜ್ ಫುಡ್ ಪ್ರಾಡಕ್ಟ್ ʼಜೇಮ್ಸ್ ಬಾಂಡ್’ ಎಂಬ ಉತ್ಪನ್ನವನ್ನು ಬಿಡುಗಡೆ ಮಾಡಿದೆ ಎಂಬುದು ಆಕ್ಷೇಪಣೆಯ ಸಾರಾಂಶ. ಅದು ತಮ್ಮ ಅತ್ಯಂತ ಜನಪ್ರಿಯ ಮತ್ತು ಮೂಲ ಉತ್ಪನ್ನಕ್ಕೆ ಸಂರ್ಪೂಣವಾಗಿ ಹೋಲುತ್ತದೆ. ʼಜೇಮ್ಸ್ ಬಾಂಡ್’ ಉತ್ಪನ್ನದ ಪ್ಯಾಕೇಜಿಂಗ್ ವಾಸ್ತವವಾಗಿ ಜೆಮ್ಸ್ ಅನ್ನು ಹೋಲುತ್ತದೆ ಎಂದು ಗಮನಿಸಿದ ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್ ಅವರು ಈ ತೀರ್ಪು ನೀಡಿದರು.
ನ್ಯಾಯಮೂರ್ತಿ ಸಿಂಗ್ ಅವರು, ಪ್ರತಿವಾದಿಯ ಪ್ಯಾಕೇಜಿಂಗ್ನಲ್ಲಿ ಅದೇ ನೀಲಿ, ನೇರಳೆ ಬೇಸ್ ಮತ್ತು ಕಲರ್ ಫುಲ್ ಬಟನ್ ಚಾಕೊಲೇಟ್ಗಳೊಂದಿಗೆ ಜೇಮ್ಸ್ ಬಾಂಡ್/ಜೇಮಿ ಬಾಂಡ್ ಮಾರ್ಕ್ ಬಳಸಲಾಗಿದೆ.
ಗೊಂದಲಮಯವಾಗಿ ಮತ್ತು ಮೋಸಗೊಳಿಸುವ ರೀತಿಯಲ್ಲಿ ಇದು ಹೋಲುತ್ತದೆ ಎಂದು ನ್ಯಾಯಾಲಯವು ಗಮನಿಸಿದೆ. ಜೊತೆಗೆ, ‘ಜೇಮ್ಸ್ ಬಾಂಡ್’ ಪಾತ್ರದ ಮೇಲಿನ ಕಲಾತ್ಮಕ ಕೆಲಸವು ಕ್ಯಾಡ್ಬರಿ ಅಭಿವೃದ್ಧಿಪಡಿಸಿದ ‘ಜೆಮ್ಸ್ ಬಾಂಡ್’ ಪಾತ್ರದಿಂದ ಪ್ರೇರಿತವಾಗಿದೆ ಎಂದು ಸಹ ನ್ಯಾಯಾಲಯ ಉಲ್ಲೇಖಿಸಿದೆ.
ನೀರಜ್ ಫುಡ್ ಪ್ರಾಡಕ್ಟ್ ತಯಾರಿಸಿದ ಉತ್ಪನ್ನವನ್ನು ‘ಜೆಮ್ಸ್’ನ “ಸಂಪೂರ್ಣ ನಕಲು ಎಂದು ಕರೆದ ನ್ಯಾಯಾಲಯ, ಕ್ಯಾಡ್ಬರಿಗೆ 15,86,928 ರೂ. ದಂಡವನ್ನು ಪಾವತಿಸಲು ಎದುರಾಳಿ ಕಂಪನಿಗೆ ಆದೇಶಿಸಿದೆ.