ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಕ್ಷೇತ್ರದಲ್ಲಿ ದಿನಕ್ಕೊಂದು ಬೆಳವಣಿಗೆ ನಡೆಯುತ್ತಿದೆ. ಹೊಸ ಹೊಸ ವಾಹನಗಳು ಮಾರುಕಟ್ಟೆಗೆ ಪ್ರವೇಶಿಸುತ್ತಿವೆ. ಈಗಾಗಲೇ ಬೇರುಬಿಟ್ಟ ಕಂಪನಿಗಳ ಹೊಸ ಮಾದರಿಯನ್ನು ಬಿಡುಗಡೆ ಮಾಡುತ್ತಿವೆ.
ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಏಥರ್ ಎನರ್ಜಿ ತನ್ನ ಪ್ರೀಮಿಯಂ ಸ್ಕೂಟರ್ 450 ಎಕ್ಸ್ ಅನ್ನು ಬಿಡುಗಡೆ ಮಾಡಿದ್ದು, ಇದರ ಬೆಲೆ 1.37 ಲಕ್ಷ ರೂ. (ಎಕ್ಸ್- ಶೋರೂಂ). ಈ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಈ ವಿಭಾಗದಲ್ಲಿ ತಾನು ಮುಂಚೂಣಿಯಲ್ಲಿ ನಿಲ್ಲಬೇಕೆಂಬ ಗುರಿಯೊಂದಿಗೆ ಮಾರುಕಟ್ಟೆಗೆ ಪ್ರವೇಶ ಕೊಟ್ಟಿದೆ.
ಈ ಹಣಕಾಸು ವರ್ಷದ ಅಂತ್ಯದ ವೇಳೆಗೆ ಭಾರತೀಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ವಿಭಾಗವು ತಿಂಗಳಿಗೆ 1 ಲಕ್ಷ ಯುನಿಟ್ಗಳ ಮಾರಾಟ ಮೀರಬಹುದು ಎಂದು ಕಂಪನಿಯು ನಿರೀಕ್ಷಿಸಿದೆ. ಹಾಗೆಯೇ ಇದು ಶೇಕಡಾ 30 ರಷ್ಟು ಮಾರುಕಟ್ಟೆ ಪಾಲನ್ನು ಹೊಂದುವ ಗುರಿ ಹಾಕಿಕೊಂಡಿದೆ.
450 ಪ್ಲಾಟ್ಫಾರ್ಮ್ ಜನರೇಶನ್ ವಾಹನವನ್ನು 2018ರಲ್ಲಿ ಪ್ರಾರಂಭಿಸಿತು. ನಂತರ 2020ರಲ್ಲಿ ಸೆಕೆಂಡ್ ಜನರೇಶನ್ ವಾಹನ ಪರಿಚಯಿಸಿತು. ಈಗ ಮೂರನೇ ಜನರೇಶನ್ ವಾಹನವನ್ನು ಮಾರುಕಟ್ಟೆಗೆ ಪರಿಚಯಿಸಿದೆ.
ದೊಡ್ಡ ಬದಲಾವಣೆ ಎಂದರೆ ಬ್ಯಾಟರಿ ಪ್ಯಾಕ್ ಸುಮಾರು 25 ಪ್ರತಿಶತದಷ್ಟು ದೊಡ್ಡದಾಗುತ್ತಿದೆ ಎಂದು ಏಥರ್ ಎನರ್ಜಿ ಸಹ-ಸಂಸ್ಥಾಪಕ ಮತ್ತು ಸಿಇಒ ತರುಣ್ ಮೆಹ್ತಾ ಹೇಳಿದ್ದಾರೆ.
ಇದರ ಪರಿಣಾಮವಾಗಿ, ಒಮ್ಮೆ ಚಾರ್ಜ್ ಮಾಡಿದರೆ 116 ಕಿಮೀನಿಂದ 146 ಕಿಮೀಗೆ ಹೆಚ್ಚಳವಾಗುತ್ತಿದೆ. ನಗರದ ಪರಿಸ್ಥಿತಿಗಳಲ್ಲಿ ಒಂದು ಚಾರ್ಜ್ನಿಂದ 85 ಕಿ.ಮೀ.ನಿಂದ ಸುಮಾರು 105 ಕಿಮೀಗೆ ಸಂಚರಿಸಬಹುದಾದಷ್ಟು ಏರಿಕೆಯಾಗಿದೆ.