ಶಿವಮೊಗ್ಗ: ಆಹಾರ ಧಾನ್ಯಗಳ ಮೇಲೆ ಜಿ.ಎಸ್.ಟಿ. ವಿಧಿಸಿರುವುದನ್ನು ವಿರೋಧಿಸಿ ದಿನಸಿ ವರ್ತಕರು ಹಾಗೂ ಅಕ್ಕಿಗಿರಣಿ ಮಾಲೀಕರು ತಮ್ಮ ವಹಿವಾಟು ಬಂದ್ ಮಾಡಿ ವರ್ತಕರ ಸಂಘದ ನೇತೃತ್ವದಲ್ಲಿ ಇಂದು ಎಪಿಎಂಸಿ ಎದುರು ಪ್ರತಿಭಟನೆ ನಡೆಸಿದರು.
ಅಕ್ಕಿ, ದಿನಸಿ ಮತ್ತು ಆಹಾರ ಧಾನ್ಯಗಳ ಮೇಲೆ ಕೇಂದ್ರ ಸರ್ಕಾರ ಶೇ. 5 ರಷ್ಟು ಜಿ.ಎಸ್.ಟಿ. ವಿಧಿಸಲು ಹೊರಟಿದೆ. ಇದು ಬ್ರಾಂಡೆಡ್ ಮತ್ತು ಅನ್ ಬ್ರಾಂಡೆಡ್ ಎರಡಕ್ಕೂ ಅನ್ವಯಿಸುತ್ತದೆ. ಸಾಮಾನ್ಯ ಜನರ ಅತ್ಯವಶ್ಯಕ ಆಹಾರ ಧಾನ್ಯಗಳ ಮೇಲೆ ತೆರಿಗೆ ವಿಧಿಸುವುದು ಸರಿಯಲ್ಲ. ಸಾಧ್ಯವಾದಷ್ಟು ಅಗ್ಗದ ಬೆಲೆಯಲ್ಲಿ ಜನರಿಗೆ ಧಾನ್ಯ ಸಿಗುವಂತಾಗಬೇಕು. ತೆರಿಗೆ ಹೊರೆಯಿಂದ ಬಡ ಮತ್ತು ಮಧ್ಯಮ ವರ್ಗದ ಜನರು ಸಂಕಷ್ಟಕ್ಕೆ ಸಿಲುಕುತ್ತಾರೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಕೇಂದ್ರ ಸರ್ಕಾರ ತಕ್ಷಣವೇ ಆಹಾರ ಧಾನ್ಯಗಳ ಮೇಲೆ ಜಿ.ಎಸ್.ಟಿ. ವಿಧಿಸುವುದನ್ನು ಕೈಬಿಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ದಿನಸಿ ವರ್ತಕರ ಸಂಘದ ಅಧ್ಯಕ್ಷ ಲಕ್ಷ್ಮಿಕಾಂತ್, ಕಾರ್ಯದರ್ಶಿ ಎಂ.ಪಿ. ನಾಗರಾಜ್, ಅಕ್ಕಿ ಗಿರಣಿ ವರ್ತಕರ ಸಂಘದ ಅಧ್ಯಕ್ಷ ಶಿವಮೂರ್ತಿ, ಕಾರ್ಯದರ್ಶಿ ನಾಗೇಶ್ ಮೊದಲಾದವರಿದ್ದರು.