alex Certify BIG NEWS: ಸಂಪೂರ್ಣ ಹಾನಿಯಾದ ಮನೆಗಳಿಗೆ 5 ಲಕ್ಷ; ತೀವ್ರ ಹಾನಿಯಾದ ಮನೆಗಳಿಗೆ 3 ಲಕ್ಷ ಪರಿಹಾರ; ಸಂಬಂಧಿಕರ ಮನೆಯಲ್ಲಿರುವವರಿಗೂ ಪಡಿತರ; ಸಿಎಂ ಘೋಷಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸಂಪೂರ್ಣ ಹಾನಿಯಾದ ಮನೆಗಳಿಗೆ 5 ಲಕ್ಷ; ತೀವ್ರ ಹಾನಿಯಾದ ಮನೆಗಳಿಗೆ 3 ಲಕ್ಷ ಪರಿಹಾರ; ಸಂಬಂಧಿಕರ ಮನೆಯಲ್ಲಿರುವವರಿಗೂ ಪಡಿತರ; ಸಿಎಂ ಘೋಷಣೆ

ಮಡಿಕೇರಿ: ಮಳೆ ಅವಾಂತರದಿಂದ ಸಂಕಷ್ಟಕ್ಕೀಡಾಗಿರುವ ಕೊಡಗು ಜಿಲ್ಲೆಯ ಮಡಿಕೇರಿಯ ಜನರ ಸಂಕಷ್ಟ ಆಲಿಸಿದ ಸಿಎಂ ಬಸವರಾಜ್ ಬೊಮ್ಮಾಯಿ, ಗಂಜಿ ಕೇಂದ್ರ ಹಾಗೂ ಸಂಬಂಧಿಕರ ಮನೆಗಳಲ್ಲಿ ಆಶ್ರಯ ಪಡೆದಿರುವ ಸಂತ್ರಸ್ತರಿಗೂ ಪಡಿತರ ವಿತರಿಸುವಂತೆ ಸೂಚಿಸಿದ್ದಾರೆ.

ಮಡಿಕೇರಿಯಲ್ಲಿ ಮಳೆಯಿಂದ ಹಾನಿ ಉಂಟಾಗಿರುವ ಕುರಿತು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಜಿಲ್ಲೆಯಲ್ಲಿ ಅಪಾಯದಲ್ಲಿದ್ದ ಕೆಲವು ಮನೆಗಳನ್ನು ಸ್ಥಳಾಂತರಿಸಲಾಗಿದ್ದು, ಕೆಲವರು ಗಂಜಿ ಕೇಂದ್ರದಲ್ಲಿದ್ದಾರೆ. ಇನ್ನು ಕೆಲವರು ಸಂಬಂಧಿಕರ ಮನೆಗಳಲ್ಲಿದ್ದಾರೆ. ಸಂಬಂಧಿಕರ ಮನೆಗಳಲ್ಲಿರುವವರಿಗೂ ಕೂಡ ಅಕ್ಕಿ, ಎಣ್ಣೆ, ಬೇಳೆ, ವಿತರಣೆಯಾಗಬೇಕು ಎಂಬ ಸೂಚನೆ ನೀಡಲಾಗಿದೆ. ಗಂಜಿ ಕೇಂದ್ರದಿಂದ ಮನೆಗೆ ತೆರಳುವ ಸಂದರ್ಭದಲ್ಲಿಯೂ ಅವರಿಗೆ ಪಡಿತರವನ್ನು ಕೊಟ್ಟು ಕಳುಹಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಈ ಬಾರಿಯ ಮುಂಗಾರಿನಲ್ಲಿ ಹತ್ತು ದಿನಗಳೊಳಗೆ ಶೇ.114% ಮಳೆಯಾಗಿದ್ದು, ಸಂಪೂರ್ಣ ಹಾನಿಗೊಳಗಾಗಿರುವ ಮನೆಗಳಿಗೆ 5 ಲಕ್ಷ ರೂ.ಗಳು ಹಾಗೂ ತೀವ್ರ ಹಾನಿಯಾದ ಮನೆಗಳಿಗೆ 3 ಲಕ್ಷ ರೂ.ಗಳು ಹಾಗೂ ಭಾಗಶ: ಹಾನಿಗೊಳಗಾದ ಮನೆಗಳಿಗೆ 50 ಸಾವಿರ ರೂ.ಗಳ ಪರಿಹಾರವನ್ನು ಕೂಡಲೇ ನೀಡಲು ಸೂಚಿಸಲಾಗಿದೆ. ಬಿದ್ದುಹೋಗಿರುವ ಮನೆಗಳಿಗೆ ತುರ್ತು ವ್ಯವಸ್ಥೆಗಾಗಿ ಈಗಾಗಲೇ 10 ಸಾವಿರ ರೂ.ಗಳನ್ನು ನೀಡಲಾಗಿದೆ ಎಂದರು.

ಗ್ರಾಮೀಣ ಪ್ರದೇಶದಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡಬೇಕು. ಕೂಡಲೇ ಅಧಿಕಾರಿಗಳು ಎಚ್ಚೆತ್ತು ಕೆಲಸ ಮಾಡಬೇಕು. ವಿದ್ಯುತ್ ಸಂಪರ್ಕಕ್ಕೆ ಸಂಬಂಧಿಸಿದಂತೆ ಕಂಟ್ರೋಲ್ ರೂಂನ್ನು ಸ್ಥಾಪಿಸಲು ಆದೇಶಿಸಲಾಗಿದೆ. ಜಿಲ್ಲಾಧಿಕಾರಿಗಳ ಬಳಿ ಸಾಕಷ್ಟು ಅನುದಾನ ಲಭ್ಯವಿದ್ದು, ಅಗತ್ಯ ಬಿದ್ದರೆ ಇನ್ನಷ್ಟು ಅನುದಾನವನ್ನು ಒದಗಿಸಲಾಗುವುದು ಎಂದರು.

ಇದೇ ವೇಳೆ ಕಾವೇರಿ ಮತ್ತು ಹಾರಂಗಿ ನದಿ ಪಾತ್ರದಲ್ಲಿ ಹೂಳು ತುಂಬಿದೆ. ಅದರ ಜೊತೆಗೆ ನೀರಿನ ಹರಿವಿನಿಂದ ನೀರು ಹೊರಗೆ ಹರಿಯುತ್ತಿದೆ. ಇದನ್ನು ತಪ್ಪಿಸಲು ಹಾರಂಗಿ ಜಲಾಶಯದ ಹಿಂದಿನ ಪ್ರದೇಶಕ್ಕೆ ಈಗಾಗಲೇ 40 ಕೋಟಿ ರೂ.ಗಳ ಮಂಜೂರಾತಿ ನೀಡಿದ್ದು, ಕೆಲಸ ಕೂಡಲೇ ಪ್ರಾರಂಭವಾಗುತ್ತದೆ. ಹೂಳು, ಮಣ್ಣು ತೆಗೆಯುವುದು ಹಾಗೂ ಗೋಡೆ ನಿರ್ಮಾಣ ಮಾಡಲಾಗುತ್ತಿದೆ. ಕಾವೇರಿ ನದಿಯಲ್ಲಿನ ಹೂಳು ತೆಗೆಯಲು ಕಾವೇರಿ ನೀರಾವರಿ ನಿಗಮಕ್ಕೆ ಸೂಚಿಸಲಾಗಿದೆ. ನೀರು ನಿಲ್ಲದಂತೆ ಮಾಡಲು ಕ್ರಮ ಕೈಗೊಳ್ಳಲು ಹಾಗೂ ಮರದ ದಿಮ್ಮಿಗಳನ್ನು ಕೂಡಲೇ ತೆರವು ಮಾಡುವಂತೆ ಅರಣ್ಯ ಇಲಾಖೆಗೆ ಸೂಚಿಸಲಾಗಿದೆ ಎಂದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...