ಸತಿ ಸಾವಿತ್ರಿ ಗಂಡನನ್ನ ಬದುಕಿಸೋದಕ್ಕೆ ತನ್ನ ಪ್ರಾಣವನ್ನೇ ಪಣಕ್ಕಿಟ್ಟಿದ್ದಳು. ಆದರೆ ಈ ಬದಲಾದ ಜಮಾನಾದಲ್ಲಿ ಹೆಂಡತಿಯೊಬ್ಬಳು ತನ್ನ ಕುಡುಕ ಗಂಡನನ್ನ ಪೊಲೀಸರಿಂದ ಬಚಾವ್ ಮಾಡಲು ತನ್ನನ್ನ ತಾನು ದುರ್ಗೆ ಅಂತ ಹೇಳಿ ಪೊಲೀಸ್ ಠಾಣೆಗೆ ಬಂದಿದ್ದಾಳೆ.
ಈ ಘಟನೆ ನಡೆದಿರೋದು ಬಿಹಾರ್ ಜುಮುಯಿ ಜಿಲ್ಲೆಯಲ್ಲಿ. ಕೂದಲನ್ನ ಬಿಚ್ಚಿಕೊಂಡು, ಒಂದು ಕೈಯಲ್ಲಿ ಅನ್ನ, ಇನ್ನೊಂದು ಕೈಯಲ್ಲಿ ಸುತ್ತಿಗೆ, ಹಣೆಯಲ್ಲಿ ಉದ್ದದ ಕೆಂಪು ಕುಂಕುಮ. ಆ ಮಹಿಳೆಯನ್ನ ತಕ್ಷಣ ನೋಡ್ತಿದ್ರೆ, ಎಂಥವರು ಕೂಡಾ ಬೆಚ್ಚಿಬೀಳುವ ಹಾಗಿತ್ತು.
ಈ ವಿಚಿತ್ರ ವೇಷಧಾರಿ ತನ್ನನ್ನ ತಾನು ದುರ್ಗೆಯ ಅವತಾರ ಅಂತ ಹೇಳಿಕೊಂಡು ಪೊಲೀಸ್ ಠಾಣೆಗೆ ಬಂದಿದ್ದಾಳೆ. ಆಕೆ ಹಾಗೆ ಬಂದಿದ್ದು ಅರೆಸ್ಟ್ ಮಾಡಿರುವ ತನ್ನ ಗಂಡನನ್ನ ಬಚಾವ್ ಮಾಡುವುದಕ್ಕೆ. ಆ ಹೈಡ್ರಾಮಾ ನೋಡಿ ಕೆಲ ನಿಮಿಷಗಳ ನಂತರ ಪೊಲೀಸರು ಆಕೆಯನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಆ ನಂತರವೇ ಆಕೆ ಸೈಲೆಂಟಾಗಿದ್ದಾಳೆ.
ಜುಮಯಿ ಜಿಲ್ಲೆಯ ಸಿಕಂದರಾ ಪೊಲೀಸ್ ಠಾಣೆಗೆ ಬಂದು ತನ್ನ ಕುಡುಕ ಪತಿಯನ್ನು ರಕ್ಷಿಸಲು ತಾಯಿ ದುರ್ಗೆ ಎಂದು ಹೇಳಿಕೊಂಡಿದ್ದಾಳೆ. ಪೊಲೀಸರಿಗೆ ಬಾಯಿಗೆ ಬಂದ ಹಾಗೆಲ್ಲ ಮಾತನಾಡಿದ್ದಾಳೆ. ಏನಾಗ್ತಿದೆ ಅನ್ನೋ ಗೊಂದಲದಲ್ಲಿದ್ದ ಪೊಲೀಸರು ಆಕೆಯ ನಾಟಕ ನೋಡಿ ಗರಂ ಆಗಿದ್ದಾರೆ. ಆಕೆಯನ್ನೂ ಅರೆಸ್ಟ್ ಮಾಡುವುದಾಗಿ ಹೇಳಿದ್ದಾರೆ. ಇದರಿಂದ ಭಯಪಟ್ಟ ಆಕೆ ಕೊನೆಗೆ ಬೇರೆ ದಾರಿಯಿಲ್ಲದೇ ಮನೆಗೆ ಹೋಗಿದ್ದಾಳೆ.
ಸಿಕಂದರಾ ಪೊಲೀಸ್ ಠಾಣೆ ವ್ಯಾಪ್ತಿಯ ಪಂಚಮಹುವಾ ಮುಶಾರಿಯಿಂದ, ಪೊಲೀಸರು ಕುಡುಕ ಕಾರ್ತಿಕ್ ಮಾಂಝಿ ಎಂಬ ವ್ಯಕ್ತಿಯನ್ನ ಬಂಧಿಸಿದ್ದಾರೆ. ಆತನನ್ನ ರಕ್ಷಿಸಲು ಪತ್ನಿ ಸಂಜು ದೇವಿ ಕೈಯಲ್ಲಿ ದೊಣ್ಣೆ ಹಿಡಿದು ತನ್ನನ್ನ ತಾನು ದುರ್ಗೆ ಅಂತ ಹೇಳಿಕೊಂಡು ಪೊಲೀಸ್ ಠಾಣೆಗೆ ಬಂದಿದ್ದಾಳೆ. ತನ್ನ ಗಂಡನನ್ನ ಬಿಡುಗಡೆ ಮಾಡಬೇಕು ಇಲ್ಲವಾದಲ್ಲಿ ತನ್ನ ಶಾಪ ತಪ್ಪಿದ್ದಲ್ಲ ಅಂತ ಬಾಯಿಗೆ ಬಂದ ಹಾಗೆ ಮಾತನಾಡಿ ಕೈಯಲ್ಲಿದ್ದ ಅನ್ನವನ್ನ ಪೊಲೀಸರ ಮೇಲೆ ಎರಚಿದ್ದಾಳೆ. ಮಹಿಳೆಯ ನಾಟಕ ಕೆಲಹೊತ್ತು ನೋಡಿ ಠಾಣಾ ಪ್ರಭಾರಿ ಜಿತೇಂದ್ರ ದೇವ ದೀಪಕ್ ಇವರು ಮಹಿಳೆ ಹಾಗೂ ಅವರೊಂದಿಗೆ ಬಂದ ಉಳಿದ ಹೆಣ್ಣುಮಕ್ಕಳನ್ನ ಪೊಲೀಸ್ ಠಾಣೆಯಿಂದ ಹೊರ ಹಾಕಿದ್ದಾರೆ. ಇನ್ನೂ ಇದೇ ರೀತಿ ಡ್ರಾಮಾ ಮಾಡಿದ್ದೇ ಆದ್ರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿ. ಅವರನ್ನ ಅಲ್ಲಿಂದ ವಾಪಸ್ಸು ಕಳುಹಿಸಿದ್ದಾರೆ.