ಟೇಲರ್ ಕನ್ಹಯ್ಯಲಾಲ್ ಶಿರಚ್ಛೇದ ಪ್ರಕರಣ, ದಿನಕ್ಕೊಂದು ತಿರುವು ಪಡೆದುಕೊಳ್ತಾ ಇದೆ. ಈಗಾಗಲೇ ಆರೋಪಿಗಳು ಪೊಲೀಸರ ವಶದಲ್ಲಿದ್ದು ಅವರಿಂದ ಹೇಳಿಕೆ ಪಡೆದುಕೊಳ್ತಿದೆ. ಈ ನಡುವೆ ರಿಯಲ್ ಹಿರೋಗಳಿಬ್ಬರ ಹೆಸರು ಕೇಳಿ ಬರ್ತಿದೆ. ಅವರ ಹೆಸರು ಶಕ್ತಿ ಸಿಂಗ್ ಮತ್ತು ಪ್ರಹ್ಲಾದ್ ಸಿಂಗ್.
ರಾಜಸ್ತಾನ್ ಉದಯಪುರದ ನಡುರಸ್ತೆಯಲ್ಲೇ ಕನ್ಹಯ್ಯಾಲಾಲ್ ನ ಕುತ್ತಿಗೆಯನ್ನ ಕತ್ತರಿಸಿ ಕೊಲೆ ಮಾಡಿ ರಿಯಾಜ್ ಮತ್ತು ಗೌಸ್ ಅಲ್ಲಿಂದ ಎಸ್ಕೇಪ್ ಆಗಿದ್ದರು. ಆದರೂ ಪೊಲೀಸರು ಕೆಲವೇ ಕೆಲವು ಗಂಟೆಗಳಲ್ಲಿ ಈ ಇಬ್ಬರೂ ಕೊಲೆಗಡುಕರನ್ನ ಬಂಧಿಸಿದ್ದರು. ಇದಕ್ಕೆ ಕಾರಣ ಇಬ್ಬರು ಯುವಕರು ಆ ಕ್ಷಣದಲ್ಲಿ ತೋರಿಸಿದ ಸಮಯಪ್ರಜ್ಞೆ. ಕನ್ಹಯ್ಯಲಾಲ್ ಕೊಲೆ ಮಾಡಿ, ಅಲ್ಲಿದ್ದ ಬೈಕ್ವೊಂದನ್ನ ಏರಿ ಹೊರಟ ಅಪರಾಧಿಗಳ ಬೆನ್ನಟ್ಟಿ ಸುಮಾರು 30 ಕಿಲೋಮೀಟರ್ ಹಿಂಬಾಲಿಸಿದ್ದಾರೆ. ಅಷ್ಟೇ ಅಲ್ಲ ತಕ್ಷಣವೇ ಲೊಕೇಶನ್ ಕಳುಹಿಸಿ ಕೊಲೆಗಾರರನ್ನ ಬಂಧಿಸಲು ಪೊಲೀಸರಿಗೆ ಸಹಾಯ ಮಾಡಿದ್ಧಾರೆ.
ಶಕ್ತಿಸಿಂಗ್ ಮತ್ತು ಪ್ರಹ್ಲಾದ್ ಸಿಂಗ್ ಇವರಿಬ್ಬರೂ ರಾಸಮಂದ ಜಿಲ್ಲೆಯವರಾಗಿದ್ದು, ಇವರಿಬ್ಬರು ಧೈರ್ಯ ಹಾಗೂ ಸಾಹಸದಿಂದ ಪೊಲೀಸರಿಗೆ ಸಹಾಯ ಮಾಡಿದ್ದ ರೀತಿಗೆ ರಿಯಲ್ ಹಿರೋ ಅನಿಸಿಕೊಳ್ಳುತ್ತಿದ್ದಾರೆ. ಅಷ್ಟೆ ಅಲ್ಲ ರಾಜಸ್ತಾನ್ ಮುಖ್ಯಮಂತ್ರಿಗಳಾದ ಅಶೋಕ್ ಗಹ್ಲೋತ್, ಈ ಇಬ್ಬರು ಯುವಕರನ್ನ ಭೇಟಿಯಾಗಿ ಇವರು ಮಾಡಿರೋ ಕೆಲಸಕ್ಕೆ ಬೆನ್ನುತಟ್ಟಿ ಶ್ಲಾಘಿಸಿದ್ದಾರೆ.
ರಾಜಸಮಂದ ಬಳಿ ಇರುವ ತಾಲ ಅನ್ನುವ ಗ್ರಾಮದವರಾಗಿರೋ ಶಕ್ತಿಸಿಂಗ್ ಮತ್ತು ಪ್ರಹ್ಲಾದ್ ಸಿಂಗ್ 28 ಜೂನ್ರಂದು ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಕನ್ಹಯ್ಯಾ ಸಿಂಗ್ ಹತ್ಯೆಯ ಸುದ್ದಿಯನ್ನ ವೀಕ್ಷಿಸುತ್ತಿರುವ ಸಮಯದಲ್ಲಿ, ಪೊಲೀಸ್ ಇಲಾಖೆಯಲ್ಲಿದ್ದ ಗೆಳೆಯ ಇವರಿಗೆ ಫೋನ್ ಮಾಡಿ RJ 27 AS 2611 ಅನ್ನೊ ಕೊಲೆಗಾರರ ಬೈಕ್ ಮಾಹಿತಿ ಕೊಟ್ಟಿದ್ದಾನೆ. ಆ ಸಮಯದಲ್ಲಿ ಅಪರಾಧಿಗಳು ಅದೇ ಗ್ರಾಮದ ಬಳಿ ಇರುವ ದೇವಗಢ ಮತ್ತು ಭೀಮ್ ಬಳಿ ತಲುಪಿದ್ದರು.
ಸುಮಾರು 20 ನಿಮಿಷದ ನಂತರ ಶಕ್ತಿಸಿಂಗ್ ಮತ್ತು ಪ್ರಹ್ಲಾದ್ ಸಿಂಗ್, ಅಪರಾಧಿಗಳು ಬೈಕ್ನಲ್ಲಿ ಓಡಿ ಹೋಗ್ತಿರೋದನ್ನ ಗಮನಿಸಿದ್ದಾರೆ. ಬೈಕ್ ನಂಬರ್ ನೋಡಿದಾಕ್ಷಣ ಇವರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಪೊಲೀಸರು ಕೊಲೆಗಡುಕರ ಮೇಲೆ ಕಣ್ಣಿಡಲು ಹೇಳಿದ್ದಾರೆ. ತಕ್ಷಣವೇ ಎಚ್ಚೆತ್ತುಕೊಂಡು ಇವರಿಬ್ಬರೂ ಆ ಅಪರಾಧಿಗಳನ್ನ ಬೆನ್ನಟ್ಟಿಕೊಂಡು ಹೋಗಿದ್ದಾರೆ. ಏನಿಲ್ಲ ಅಂದರೂ 30 ಕಿಲೋಮೀಟರ್ನಷ್ಟು ಹಿಂಬಾಲಿಸಿದ್ದಾರೆ. ಜೊತೆಗೆ ಪೊಲೀಸರಿಗೆ ಕ್ಷಣಕ್ಷಣದ ಮಾಹಿತಿಯನ್ನ ಕೊಡುತ್ತ ಹೋಗಿದ್ದಾರೆ. ಇವರಿಬ್ಬರು ಕೊಟ್ಟ ಮಾಹಿತಿ ಆಧಾರದ ಮೇಲೆಯೇ ಪೊಲೀಸರು ಕೊಲೆಗಾರರ ಜಾಡು ಹಿಡಿದುಕೊಂಡು ಹೋಗಿದ್ದಾರೆ.
ಈಗ ಇಬ್ಬರೂ ಕೊಲೆಗಾರರು ಕಂಬಿ ಎಣಿಸುತ್ತಿದ್ದಾರೆ. ಶಕ್ತಿಸಿಂಗ್ ಮತ್ತು ಪ್ರಹ್ಲಾದ್ ಸಿಂಗ್ ಅವರ ಸಮಯಪ್ರಜ್ಞೆಯಿಂದಲೇ ಈ ಪಾಪಿಗಳನ್ನ ಇಷ್ಟು ಬೇಗ ಬಂಧಿಸಲು ಸಾಧ್ಯವಾಗಿದ್ದು ಅಂತ, ಎಲ್ಲರೂ ಇವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.