ಮೈಸೂರು: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬಗ್ಗೆ ಮತ್ತೆ ಪುನರುಚ್ಛರಿಸಿರುವ ಸಚಿವ ಉಮೇಶ್ ಕತ್ತಿ, ಆಂಧ್ರ ಹಾಗೂ ತೆಲಂಗಾಣದಂತೆಯೇ ನಮ್ಮ ರಾಜ್ಯದಲ್ಲಿಯೂ ಪ್ರತ್ಯೇಕ ರಾಜ್ಯವಾಗಬೇಕು ಎಂಬುದು ನನ್ನ ಆಶಯ ಎಂದಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಉಮೇಶ್ ಕತ್ತಿ, ಸಿಎಂ ಸ್ಥಾನಕ್ಕಾಗಿ ನಾನು ಪ್ರತ್ಯೇಕ ರಾಜ್ಯ ಕೇಳುತ್ತಿಲ್ಲ. ಪ್ರತ್ಯೇಕ ರಾಜ್ಯವಾದರೂ ಕೂಡ ನಾವು ಕನ್ನಡಿಗರಾಗಿಯೇ ಇರುತ್ತೇವೆ. ಆಂಧ್ರ, ತೆಲಂಗಾಣದಂತೆ ನಮ್ಮ ರಾಜ್ಯದಲ್ಲೂ ಪ್ರತ್ಯೇಕ ರಾಜ್ಯವಾಗಲಿ ಎಂದು ಬಯಸುತ್ತೇನೆ. ನಮ್ಮ ಜನರ ದೃಷ್ಟಿಯಿಂದ ನಾನೇ ಹಿರಿಯನಾಗಿ ಧ್ವನಿ ಎತ್ತಿದ್ದೇನೆ ಎಂದರು.
ಹೈಕಮಾಂಡ್ ಮಟ್ಟದಲ್ಲೂ ಹೊಸ ರಾಜ್ಯಗಳ ರಚನೆ ಬಗ್ಗೆ ಚಿಂತನೆ ನಡೆದಿದೆ ಎಂಬುದು ನನ್ನ ಅನಿಸಿಕೆ ನಾನು ಮಾತನಾಡಿದರೆ ಆ ವಿಚಾರ ಕೇಂದ್ರದ ಮಟ್ಟಕ್ಕೂ ಹೋಗುತ್ತದೆ. ಈ ಬಗ್ಗೆ ಪ್ರಧಾನಿ ಮೋದಿ ಹಾಗೂ ಕೇಂದ್ರ ಸಚಿವರನ್ನು ಭೇಟಿಯಾಗಿ ಚರ್ಚಿಸುತ್ತೇನೆ ಎಂದು ಹೇಳಿದರು.