ಇತ್ತೀಚೆಗೆ ತುರ್ತಾಗಿ ನೆರವಿನ ಅವಶ್ಯಕತೆ ಇದೆ ಎಂದು ವಾಟ್ಸಪ್, ಫೇಸ್ ಬುಕ್ ಮತ್ತು ಇತರೆ ಸಾಮಾಜಿಕ ಜಾಲತಾಣದಲ್ಲಿ ಬ್ಯಾಂಕ್ ಖಾತೆ ಸಹಿತ ಕೋರಿಕೆ ಬರುವುದನ್ನು ಕಂಡಿರಬಹುದು. ಇದರಲ್ಲಿ ಎಷ್ಟು ನೈಜ ಎಂಬುದೇ ಪ್ರಶ್ನೆ. ಜನರ ಮುಗ್ಧತೆ ದುರುಪಯೋಗವಾಗುವ ಸಾಧ್ಯತೆಯೂ ಇದೆ.
ಇಲ್ಲೊಂದು ಪ್ರಕರಣದಲ್ಲಿ ನಕಲಿ ಕ್ಯಾನ್ಸರ್ ರೋಗಿ ಸಾರ್ವಜನಿಕರಿಂದ 45 ಸಾವಿರ ಪೌಂಡ್ ವಸೂಲಿ ಮಾಡಿ ವಂಚಿಸಿದ್ದ ಪ್ರಕರಣ ಬಯಲಾಗಿದೆ. ತಾನು ಕ್ಯಾನ್ಸರ್ಗೆ ತುತ್ತಾಗಿದ್ದೇನೆಂದು ನಟಿಸಿ ಹಿತೈಷಿಗಳನ್ನು ವಂಚಿಸಿದ ಬ್ರಿಟಿಷ್ ಮಹಿಳೆಗೆ ಕೇವಲ ಐದು ಪೌಂಡ್ಗಳನ್ನು ಹಿಂದಿರುಗಿಸುವ ಶಿಕ್ಷೆ ವಿಧಿಸಲಾಗಿದೆ.
44 ವರ್ಷದ ನಿಕೋಲ್ ಎಲ್ಕಬ್ಬಾಸ್, ಸ್ಪೇನ್ನಲ್ಲಿ ಖಾಸಗಿ ಅಂಡಾಶಯದ ಕ್ಯಾನ್ಸರ್ ಚಿಕಿತ್ಸೆಗಾಗಿ ಪಾವತಿಸಬೇಕಾದ ಕಥೆಯನ್ನು ಹೆಣೆದಳು. ಹಿತೈಷಿಗಳಿಂದ ಒಟ್ಟು 45 ಸಾವಿರ ಪೌಂಡ್ಗಿಂತ ಹೆಚ್ಚು ವಸೂಲಿ ಮಾಡಿದಳು. ಬಳಿಕ ಗೇಮಿಂಗ್, ವೆಕೇಶನ್ ಟಿಕೆಟ್ ಮತ್ತು ಊಟಕ್ಕೆಂದು ಆ ಹಣವನ್ನು ವೆಚ್ಚ ಮಾಡಿದಳು.
ಪ್ರಕರಣ ಬಯಲಾದ ನಂತರ ಆಕೆಗೆ ಮರುಪಾವತಿ ಮಾಡಲು ಸಂಪನ್ಮೂಲ ಇರಲಿಲ್ಲ. 700 ಮಂದಿ ವಂಚನೆಗೊಳಗಾದವರಿದ್ದು, ಅವರೆಲ್ಲರಿಗೂ ತಲಾ 5 ಪೌಂಡ್ ನೀಡಬೇಕೆಂದು ಕೋರ್ಟ್ ಆದೇಶಿಸಿದೆ. ನ್ಯಾಯಾಲಯದಲ್ಲಿ ಅಪರಾಧ ಸಾಬೀತಾದ ನಂತರ ನಿಕೋಲ್ಗೆ ಎರಡು ವರ್ಷ ಒಂಬತ್ತು ತಿಂಗಳ ಜೈಲು ಶಿಕ್ಷೆ ಸಹ ವಿಧಿಸಿದೆ.
13ನೇ ಅಂತಸ್ತಿನಿಂದ ಹಾರಿ 83 ವರ್ಷದ ವೃದ್ಧೆ ಆತ್ಮಹತ್ಯೆ
ಫಂಡ್ ಸಂಗ್ರಹಣೆಯ ಪುಟದಲ್ಲಿ ಆಕೆಯ ತಾಯಿ ಡೆಲೋರೆಸ್ ಹಣಕ್ಕಾಗಿ ಮನವಿ ಮಾಡಿದರು, ಆದರೆ ಆಕೆಯನ್ನು ಪರೀಕ್ಷಿಸಿದ್ದ ಆಂಕೊಲಾಜಿಸ್ಟ್ಗೆ ವಂಚನೆ ಮಾಡುತ್ತಿರುವುದು ಗಮನಕ್ಕೆ ಬಂದಾಗ ಪ್ರಕರಣ ಬಯಲಿಗೆ ಬಂದಿದೆ.
ಇಂತಹ ಕ್ರೌಡ್ ಸೋರ್ಸಿಂಗ್ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಕೋವಿಡ್ -19 ಏಕಾಏಕಿ ಉತ್ತುಂಗದಲ್ಲಿದ್ದಾಗ ಹೆಚ್ಚಿನ ಸಂಖ್ಯೆಯ ಜನರು ಕ್ರೌಡ್ಸೋರ್ಸಿಂಗ್ ವೆಬ್ಸೈಟ್ಗಳಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಅನೇಕರ ಕತೆಗಳು ಮಾಧ್ಯಮದಲ್ಲಿ ಬಂದಿವೆ.
ಈ ವೇದಿಕೆಯ ವಿಶ್ವಾಸಾರ್ಹತೆ ಬೆಳೆದಂತೆ, ಸುಳ್ಳು ಮತ್ತು ಅಪ್ರಾಮಾಣಿಕ ರೋಗಿಗಳ ಸಂಖ್ಯೆಯೂ ಹೆಚ್ಚಾಯಿತು. ಸೂಕ್ತ ದಾಖಲೆಗಳು ಇಲ್ಲದೆ ಮತ್ತು ಕಾಯಿಲೆ ಹೆಸರು ಪ್ರಸ್ತಾಪಿಸಿ ಬಹಳಷ್ಟು ಜನರು ಹಣ ಕೇಳುತ್ತಿದ್ದಾರೆ.