ಗಗನಯಾನದಲ್ಲಿರುವಾಗ ಕೂದಲು ತೊಳೆಯುವುದು ಗಗನಯಾತ್ರಿಗಳಿಗೆ ಸಾಕಷ್ಟು ಸಾಹಸ ಮತ್ತು ಕಷ್ಟಕರ ಕೆಲಸ. ನಾಸಾ ಮಹಿಳಾ ಗಗನಯಾತ್ರಿಯೊಬ್ಬರು ಬಾಹ್ಯಾಕಾಶದಲ್ಲಿ ಕೂದಲು ತೊಳೆಯುವುದು ಹೇಗೆ ಎಂದು ತೋರಿಸಿದ್ದಾರೆ.
ಜೀರೋ ಗ್ರಾವಿಟಿಯಲ್ಲಿ ಕೂದಲು ತೊಳೆಯುವ ಪ್ರಕ್ರಿಯೆಯನ್ನು ಕರೆನ್ ನೈಬರ್ಗ್ ಎಂಬ ಅಮೇರಿಕನ್ ಗಗನಯಾತ್ರಿ ರೆಕಾರ್ಡ್ ಮಾಡಿದ್ದು ಜಾಲತಾಣದಲ್ಲಿ ವಿಡಿಯೊವನ್ನು ಬಿಡುಗಡೆ ಮಾಡಲಾಗಿದೆ. ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ವಾಸಿಸುತ್ತಿರುವ ಆರು ಬಾಹ್ಯಾಕಾಶ ಯಾತ್ರಿಗಳಲ್ಲಿ ಇವರೂ ಒಬ್ಬರು.
ಬಾಹ್ಯಾಕಾಶದಲ್ಲಿ ನನ್ನ ಕೂದಲನ್ನು ಹೇಗೆ ತೊಳೆಯುತ್ತೇನೆ ಎಂದು ಅನೇಕರು ಕೇಳುತ್ತಿದ್ದರು. ನಾನು ಅದನ್ನು ಹೇಗೆ ಮಾಡುತ್ತೇನೆ ಎಂದು ಆಕೆ ವಿಡಿಯೋದಲ್ಲಿ ಹೇಳುವಾಗ ಆಕೆಯ ಕೂದಲು ಹಾರಾಡುವುದನ್ನು ಕಾಣಬಹುದು.
ಭೂಮಿಯ ಮೇಲೆ ಇದ್ದಾಗ ಕೂದಲನ್ನು ತೊಳೆಯುವುದು ತುಂಬಾ ಸರಳ. ಶಾಂಪೂ ಹಾಕಿದ ನಂತರ ಶವರ್ ಅಡಿಯಲ್ಲಿ ನಿಂತು ತೊಳೆಯಬಹುದು. ಭೂಮಿಯ ಮೇಲಿನ ಗುರುತ್ವಾಕರ್ಷಣೆಯ ಶಕ್ತಿಗಳಿಂದಾಗಿ ಇದು ಸಾಧ್ಯವಾಗುತ್ತದೆ. ಆದರೆ, ಗುರುತ್ವಾಕರ್ಷಣೆಯ ಕೊರತೆಯಿಂದಾಗಿ ಬಾಹ್ಯಾಕಾಶ ನಿಲ್ದಾಣದಲ್ಲಿ ಅದು ಸಾಧ್ಯವಿಲ್ಲ.
ನೈಬರ್ಗ್ ಪ್ರಕಾರ, ಕೆಲವು ಉಪಕರಣಗಳು ಬಾಹ್ಯಾಕಾಶದಲ್ಲಿ ಕೂದಲು ತೊಳೆಯಲು ಸಹಾಯ ಮಾಡುತ್ತದೆ. ಕೆಲವೊಮ್ಮೆ ನೀರು ವಿರುದ್ಧ ದಿಕ್ಕಿನಲ್ಲಿ ಬರುತ್ತದೆ ಮತ್ತು ಬಾಹ್ಯಾಕಾಶದಲ್ಲಿ ನಿಮ್ಮ ಕೂದಲನ್ನು ತೊಳೆಯುವಾಗ ಅದನ್ನು ಸರಿಯಾಗಿ ಹಿಡಿದಿಡಲು ತುಂಬಾ ಕಷ್ಟವಾಗುತ್ತದೆ ಎಂದು ಹೇಳಿಕೊಂಡಿದ್ದಾರೆ.