ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ ಯುವಕನೊಬ್ಬ ಬಳಿಕ ವಿದೇಶಕ್ಕೆ ತೆರಳಿದ್ದು, ತನ್ನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಕ್ಕೆ ಅಲ್ಲಿಂದಲೇ ವಾಟ್ಸಾಪ್ ಕರೆ ಮಾಡಿ ಬೆದರಿಕೆ ಹಾಕಿರುವ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ.
ಹೊಳೆಹೊನ್ನೂರು ಸಮೀಪದ ಹಕ್ಕಿಪಿಕ್ಕಿ ಕ್ಯಾಂಪ್ ಯುವಕ ತನ್ನ ಸಂಬಂಧಿ ಅಪ್ರಾಪ್ತೆ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ. ಇದನ್ನು ಬಾಲಕಿ ತನ್ನ ಅಜ್ಜಿಯ ಬಳಿ ಹೇಳಿದ್ದು ಬಳಿಕ ಪೋಷಕರು ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ತನ್ನ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ಆರೋಪಿ ತನ್ನ ತಂದೆ ಇರುವ ಕ್ಯಾಮರೋನ್ ಗೆ ಪರಾರಿಯಾಗಿದ್ದು, ಈಗ ಅಲ್ಲಿಂದಲೇ ಬಾಲಕಿಗೆ ವಾಟ್ಸಾಪ್ ಕರೆ ಮಾಡಿ ದೂರು ಹಿಂಪಡೆಯುವಂತೆ ಬೆದರಿಕೆ ಹಾಕಿದ್ದಾನೆ ಎಂದು ಹೇಳಲಾಗಿದೆ.
ಈ ಕುರಿತು ಈಗ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಆರೋಪಿ ಯುವಕನ ಸಂಬಂಧಿಗಳ ಮನೆಗೆ ತೆರಳಿದ್ದ ಪೊಲೀಸರು ಆತನನ್ನು ವಾಪಸ್ ಭಾರತಕ್ಕೆ ಕರೆಸುವಂತೆ ತಾಕೀತು ಮಾಡಿದ್ದಾರೆ.