ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸರಳ ವ್ಯಕ್ತಿತ್ವಕ್ಕೆ ಹೆಸರಾದವರು. ಅವರ ಸರಳ, ಸಜ್ಜನಿಕೆ, ವಾಕ್ಚಾತುರ್ಯವನ್ನು ಸಾಕಷ್ಟು ಜನ ಮೆಚ್ಚಿಕೊಂಡಿದ್ದಾರೆ.
ಈಗ ಅವರು ಮಾಡಿರುವ ಕಾರ್ಯವೊಂದಕ್ಕೆ ಭಾರೀ ಪ್ರಶಂಸೆ ವ್ಯಕ್ತವಾಗತೊಡಗಿದೆ. ಅದೆಂದರೆ, ಭಾಷಣ ಮಾಡುತ್ತಿದ್ದವರ ದಾಹವನ್ನು ನೀಗಿಸಿದ್ದಾರೆ ನಿರ್ಮಲಾ ಸೀತಾರಾಮನ್.
ಹೌದು, ಶನಿವಾರ ಮುಂಬೈನಲ್ಲಿ ನ್ಯಾಷನಲ್ ಡೆಪೋಸಿಟರಿ ಲಿಮಿಟೆಡ್ (ಎನ್ ಎಸ್ ಡಿ ಎಲ್)ನ ಬೆಳ್ಳಿ ಹಬ್ಬ ಸಮಾರಂಭ ನಡೆದಿತ್ತು. ಈ ಸಭೆಯಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪದ್ಮಜಾ ಚುಂಡೂರು ಅವರು ಭಾಷಣ ಮಾಡುತ್ತಿದ್ದರು. ಈ ವೇಳೆ, ಪದ್ಮಜಾ ಅವರ ಗಂಟಲು ಒಣಗಿ ನೀರು ಕುಡಿಯಬೇಕೆನಿಸಿದೆ. ಆಗ ಡಯಾಸ್ ನಲ್ಲಿಯೇ ನಿಂತು ಹೊಟೇಲ್ ನ ಸಿಬ್ಬಂದಿಗೆ ನೀರು ಕೊಡುವಂತೆ ಕೇಳಿದ್ದಾರೆ.
ಮಧುರ ಧ್ವನಿಯಲ್ಲಿ ಲತಾ ಮಂಗೇಶ್ಕರ್ ಹಾಡು ಹಾಡಿದ ʼದಾದಿ ಮಾʼ
ಆದರೆ, ಸಿಬ್ಬಂದಿ ಅನತಿ ದೂರದಲ್ಲಿ ಇದ್ದುದರಿಂದ ಬರುವುದು ತಡವಾಗಿದೆ. ನಿರ್ಮಲಾ ಸೀತಾರಾಮನ್ ಅವರು ತಡ ಮಾಡದೇ ಎದ್ದು ತಮ್ಮ ಎದುರಿನಲ್ಲಿಟ್ಟಿದ್ದ ನೀರಿನ ಬಾಟಲಿಯನ್ನು ಡಯಾಸ್ ನಲ್ಲಿದ್ದ ಪದ್ಮಜಾ ಅವರಿಗೆ ಕೊಟ್ಟು ದಾಹ ನೀಗಿಸಿದ್ದಾರೆ.
ಕೇಂದ್ರ ಮಂತ್ರಿಯೊಬ್ಬರು ತಮಗೆ ನೀರು ಕೊಟ್ಟಿದ್ದನ್ನು ಕಂಡು ಅರೆಕ್ಷಣ ಅವಾಕ್ಕಾದ ಪದ್ಮಜಾ ಅವರು ಸಾವರಿಸಿಕೊಂಡು ನಿರ್ಮಲಾ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ತಾವೊಬ್ಬ ಕೇಂದ್ರ ಮಂತ್ರಿ ಎಂಬ ಹಮ್ಮು ಬಿಮ್ಮು ತೋರದೇ ಭಾಷಣಕಾರ್ತಿಗೆ ನೀರು ಕೊಟ್ಟಿದ್ದರ ಬಗ್ಗೆ ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.