ಹನುಮಾನ್ ಚಾಲೀಸ ಈಗ ಲಂಡನ್ ಗೂ ಲಗ್ಗೆ ಇಟ್ಟಿದೆ. ಅಲ್ಲಿನ ಕೆಲವು ಹಿಂದೂಪರ ಸಂಘಟನೆಗಳು `ಹನುಮಾನ್ ಚಾಲೀಸ’ ಪಠಣವನ್ನು ಬೆಂಬಲಿಸುವುದಾಗಿ ಹೇಳಿವೆ.
ಇದೇ ವೇಳೆ, ಮಹಾರಾಷ್ಟ್ರ ಸಂಸದೆ ನವನೀತ್ ರಾಣಾ ಮತ್ತು ಆಕೆಯ ಪತಿ ಶಾಸಕ ರವಿ ರಾಣಾ ಅವರನ್ನು ಸೇರಿದಂತೆ ಹನುಮಾನ್ ಚಾಲೀಸ ಪಠಣಕ್ಕೆ ಅವಕಾಶ ನೀಡದೇ ಭಕ್ತರನ್ನು ಬಂಧಿಸುತ್ತಿರುವ ಭಾರತದ ವಿವಿಧ ರಾಜ್ಯ ಸರ್ಕಾರಗಳ ವಿರುದ್ಧ ಹಿಂದೂಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
ರಾಣಾ ದಂಪತಿ ಮತ್ತು ಭಕ್ತರಿಗೆ ಬೆಂಬಲವಾಗಿ ಲಂಡನ್ ನಲ್ಲಿರುವ ಭಾರತೀಯ ಮೂಲದವರು ಹನುಮಾನ್ ಚಾಲೀಸ ಅನ್ನು ಪಠಣ ಮಾಡುವುದಾಗಿ ಹೇಳಿದ್ದಾರೆ.
ಲಂಡನ್ ಮೂಲದ ಸಂಘಟನೆಗಳು ಪ್ರಕಟಣೆಯೊಂದನ್ನು ಹೊರಡಿಸಿ, ರೀಚ್ ಇಂಡಿಯಾ ಯುಕೆ ಚಾಪ್ಟರ್ ಸೇರಿದಂತೆ ಯುಕೆಯಲ್ಲಿರುವ ನಾವೆಲ್ಲರೂ ಒಟ್ಟಾಗಿ ಶ್ರೀ ಹನುಮಾನ್ ಚಾಲೀಸ ಪಠಣ ಮಾಡಲಿದ್ದೇವೆ ಎಂದು ತಿಳಿಸಿವೆ.
ಭಾರತದ ವಿವಿಧ ಭಾಗಗಳಲ್ಲಿ ಪವಿತ್ರ ಹನುಮಾನ್ ಚಾಲೀಸ ಮತ್ತು ರಾಮಾಯಣಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ವ್ಯಕ್ತಿಗಳಿಗೆ, ಸಂಘಟನೆಗಳಿಗೆ ಮತ್ತು ಗುಂಪುಗಳಿಗೆ ಒಂದು ಸ್ಪಷ್ಟ ಸಂದೇಶ ಕಳುಹಿಸುವುದು ಈ ಪಠಣದ ಪ್ರಮುಖ ಉದ್ದೇಶವಾಗಿದೆ ಎಂದು ಸಂಘಟನೆಗಳು ತಿಳಿಸಿವೆ.
ನಾವು ಸನಾತನ ಧರ್ಮದ ಆರಾಧಕರಾಗಿದ್ದು, ನಮ್ಮ ಧರ್ಮ ಪರಿಪಾಲನೆ ಮಾಡುವುದು ನಮ್ಮ ಮೂಲಭೂತ ಹಕ್ಕಾಗಿದೆ. ಇದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದೂ ಹೇಳಿವೆ.