ಉತ್ತರಪ್ರದೇಶದ ಹಿರಿಯ ಅಧಿಕಾರಿಣಿಯೊಬ್ಬರು `ಗುಂಡು’ ಹಾಕಿ ಅಲ್ಲಿನ ಪೊಲೀಸರಿಗೆ ಭಾರೀ ತಲೆನೋವನ್ನು ತಂದಿಟ್ಟಿದ್ದಾರೆ.
ದೇವಿಪಟಾನ್ ಮಂಡಲ್ ನ ಉಪ ಕಾರ್ಮಿಕ ಆಯುಕ್ತೆಯಾಗಿರುವ ರಚನಾ ಕೇಸರ್ವಾನಿ ಏಪ್ರಿಲ್ 27 ರಂದು ಲಕ್ನೋದಿಂದ ಗೋಂಡಾದಲ್ಲಿರುವ ತಮ್ಮ ಕಚೇರಿಗೆ ಕಾರನ್ನು ಚಲಾಯಿಸಿಕೊಂಡು ಹೋಗುತ್ತಿದ್ದರು. ಈ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ಕಾರು ಡಿವೈಡರ್ ಗೆ ಗುದ್ದಿದೆ.
ಆಗ ಸ್ಥಳಕ್ಕೆ ಆಗಮಿಸಿದ ಸಂಚಾರಿ ಮತ್ತು ಕಾನೂನು ವಿಭಾಗದ ಪೊಲೀಸರು ಪರಿಶೀಲನೆ ನಡೆಸಿದಾಗ ರಚನಾ ಕಂಠಪೂರ್ತಿ ಕುಡಿದು ವಾಹನ ಚಲಾಯಿಸುತ್ತಿದ್ದುದು ದೃಢಪಟ್ಟಿತು.
ಹೇಳಿ ಕೇಳಿ ಉನ್ನತಾಧಿಕಾರಿಯಾದ ಕಾರಣ ಪೊಲೀಸರು ಸಮಾಧಾನಚಿತ್ತದಿಂದಲೇ ಆಕೆಯನ್ನು ಕಾರಿನಲ್ಲಿ ಕೂರಿಸಿ ಕಳುಹಿಸಲು ಯತ್ನಿಸಿದ್ದಾರೆ. ಆದರೆ, ಇದಕ್ಕೊಪ್ಪದ ಅಧಿಕಾರಿಣಿ ತೂರಾಡುತ್ತಲೇ ಕಾರಿನಲ್ಲಿ ಕುಳಿತುಕೊಳ್ಳಲು ವಿರೋಧ ವ್ಯಕ್ತಪಡಿಸಿದ್ದಾಳೆ.
ಮೇಡಂ ನೀವು ಬೀಳುತ್ತೀರಿ. ನಿಮಗೆ ನಡೆಯಲು ಆಗುತ್ತಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಮನವೊಲಿಸಲು ಪ್ರಯತ್ನಿಸಿದರಾದರೂ, ಇಲ್ಲಾ ನಾನು ಬೀಳುವುದಿಲ್ಲ. ನನ್ನನ್ನು ಬಿಟ್ಟುಬಿಡಿ ಎಂದು ವರಾತ ತೆಗೆದಿದ್ದಾರೆ.
ಆದರೆ, ಪೊಲೀಸ್ ಸಿಬ್ಬಂದಿ ಬಲವಂತವಾಗಿ ಆಕೆಯನ್ನು ಬೇರೊಂದು ಕಾರಿನಲ್ಲಿ ಕೂರಿಸಿ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆ ನಡೆಸಿದ ನಂತರ ಅಧಿಕಾರಿಣಿಯನ್ನು ಆಕೆಯ ಪತಿಯ ಜತೆಯಲ್ಲಿ ಕಳುಹಿಸಿಕೊಟ್ಟಿದ್ದಾರೆ.
ಈ ರಂಪಾಟದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆಯೇ ಉತ್ತರ ಪ್ರದೇಶ ಸರ್ಕಾರ ಘಟನೆಗೆ ಸಂಬಂಧಿಸಿದಂತೆ ತನಿಖೆಗೆ ಆದೇಶ ನೀಡಿದೆ.