ಬಹುಶಃ ಪ್ರಯಾಣಿಕರು ರೈಲ್ವೆ ನಿಲ್ದಾಣಗಳಲ್ಲಿ ಮಾಡಿಕೊಂಡಷ್ಟು ಗಲಿಬಿಲಿಯನ್ನು ಬೇರೆಲ್ಲೂ ಮಾಡಿಕೊಳ್ಳುವುದಿಲ್ಲ. ಇನ್ನೇನು ರೈಲು ಹೊರಡಬೇಕೆನ್ನುವಷ್ಟರಲ್ಲಿ ಓಡೋಡಿ ಬಂದು ಚಲಿಸುತ್ತಿರುವ ರೈಲನ್ನು ಹತ್ತಲು ಅಥವಾ ರೈಲಿನಿಂದ ಇಳಿಯಲು ಪ್ರಯತ್ನಿಸುತ್ತಾರೆ.
ಮಹಾರಾಷ್ಟ್ರದ ಜೋಗೇಶ್ವರಿ ರೈಲು ನಿಲ್ದಾಣದಲ್ಲಿಯೂ ಇಂತಹ ಗಡಿಬಿಡಿಯ ಪ್ರಯತ್ನ ಮಾಡಿದ ಬಾಲಕಿ ಚಲಿಸುತ್ತಿರುವ ರೈಲಿನಿಂದ ಇಳಿಯಲು ಹೋಗಿ ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುವವಳಿದ್ದಳು. ಆದರೆ, ಪ್ಲಾಟ್ ಫಾರ್ಮ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಲ್ತಾಫ್ ಶೇಕ್ ಎಂಬ ಹೋಂಗಾರ್ಡ್ ಈ ಬಾಲಕಿಯನ್ನು ಪ್ರಾಣಾಪಾಯದಿಂದ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಮೈಜುಮ್ಮೆನ್ನುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ವಿಡಿಯೋ ತುಣುಕುಗಳು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗಿವೆ.
ʼಆಚಾರ್ಯʼ ಚಿತ್ರ ಬಿಡುಗಡೆಗೂ ಮುನ್ನ ಕನಕದುರ್ಗೆಗೆ ರಾಮ್ ಚರಣ್ ಪ್ರಾರ್ಥನೆ
ಏಪ್ರಿಲ್ 16 ರಂದು ನಡೆದ ಘಟನೆಯ ವಿಡಿಯೋವನ್ನು ಮುಂಬೈ ರೈಲ್ವೇಸ್ ನ ಪೊಲೀಸ್ ಆಯುಕ್ತ ಖ್ವಾಸಿರ್ ಖಾಲಿದ್ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.
ಮೂವರ ಪೈಕಿ ಓರ್ವ ಬಾಲಕಿ ವೇಗವಾಗಿ ಚಲಿಸುತ್ತಿರುವ ರೈಲಿನಿಂದ ಹಿಮ್ಮುಖವಾಗಿ ಇಳಿಯಲು ಪ್ರಯತ್ನಿಸಿ ಕೆಳಗೆ ಬಿದ್ದು ರೈಲಿನಡಿಗೆ ಸಿಲುಕಬೇಕೆನ್ನುವಷ್ಟರಲ್ಲಿ ಅಲ್ತಾಫ್ ಓಡೋಡಿ ಬಂದು ಆಕೆಯನ್ನು ರಕ್ಷಿಸಿದ್ದಾರೆ. ಇಷ್ಟಾಗುವುದರೊಳಗೆ ಆಕೆಯ ಇನ್ನಿಬ್ಬರು ಸ್ನೇಹಿತೆಯರು ರೈಲಿನಿಂದ ಧುಮುಕಿದ್ದಾರೆ.
ಅಲ್ತಾಫ್ ಅವರ ಈ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ ಮತ್ತು ಈ ಶಾಕಿಂಗ್ ವಿಡಿಯೋವನ್ನು 16 ಸಾವಿರಕ್ಕೂ ಅಧಿಕ ಜನರು ವೀಕ್ಷಣೆ ಮಾಡಿದ್ದಾರೆ.