ಷಹಜಹಾನ್‌ಪುರ: ದೇಶದಲ್ಲಿ ಇಂಧನ ಬೆಲೆ ಜೊತೆ ಅಗತ್ಯ ವಸ್ತುಗಳ ದರಗಳೂ ಹೆಚ್ಚಳವಾಗಿದೆ. ನಿಂಬೆ ಹಣ್ಣಿನ ಬೆಲೆ ಕೂಡ ಗಗನಕ್ಕೇರಿದ್ದು, ಖತರ್ನಾಕ್ ಖದೀಮರು ನಿಂಬೆ ಹಣ್ಣುಗಳನ್ನು ಕದ್ದೊಯ್ದ ಘಟನೆ ನಡೆದಿದೆ.
ಶಹಜಾನ್‌ಪುರದಲ್ಲಿ ಕಳ್ಳರು ತರಕಾರಿ ವ್ಯಾಪಾರಿಯ ಗೋಡೌನ್‌ನಲ್ಲಿ ಸಂಗ್ರಹಿಸಲಾಗಿದ್ದ 60 ಕೆ.ಜಿ ನಿಂಬೆಯನ್ನು ಕದ್ದಿದ್ದಾರೆ. ಗೋದಾಮಿನಲ್ಲಿದ್ದ ಇನ್ನೂ ಕೆಲವು ದುಬಾರಿ ಬೆಲೆಯ ತರಕಾರಿಗಳನ್ನೂ ಕಳ್ಳರು ಕದ್ದೊಯ್ದಿದ್ದಾರೆ.
ತರಕಾರಿ ವ್ಯಾಪಾರಿ ಮನೋಜ್ ಕಶ್ಯಪ್ ಎಂಬುವವರ ಗೋಡೌನ್‌ನಿಂದ ಕಳ್ಳರು 60 ಕೆ.ಜಿ. ನಿಂಬೆ, 40 ಕೆ.ಜಿ ಈರುಳ್ಳಿ, 38 ಕೆ.ಜಿ ಬೆಳ್ಳುಳ್ಳಿಯನ್ನು ಕದ್ದೊಯ್ದಿದ್ದಾರೆ.
ಬಜಾರಿಯಾ ಪ್ರದೇಶದಲ್ಲಿ ಅಂಗಡಿ ಹೊಂದಿರುವ ಬಹದ್ದೂರ್‌ಗಂಜ್ ಮೊಹಲ್ಲಾದ ವ್ಯಾಪಾರಿ, ಭಾನುವಾರ ಬೆಳಿಗ್ಗೆ ತರಕಾರಿ ಮಾರುಕಟ್ಟೆಗೆ ಬಂದಾಗ ಗೋಡೌನ್‌ನ ಬೀಗ ಒಡೆದು ರಸ್ತೆಯ ಮೇಲೆ ತರಕಾರಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡುಬಂದಿದೆ. ಕಳ್ಳತನವಾಗಿರುವ ಬಗ್ಗೆ ಮಾಹಿತಿ ಪಡೆದ ವರ್ತಕರು ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶೀಘ್ರದಲ್ಲೇ ಕಳ್ಳರನ್ನು ಪತ್ತೆಹಚ್ಚಿ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಲಕ್ನೋದಲ್ಲಿ, ನಿಂಬೆಹಣ್ಣು ಪ್ರತಿ ಕೆ.ಜಿ.ಗೆ 325 ರೂ. ಮತ್ತು ಪ್ರತಿ ಕಾಯಿಗೆ ರೂ. 13ಕ್ಕೆ ಮಾರಾಟವಾಗುತ್ತಿದೆ.