ಆಸ್ಕರ್ ವೇದಿಕೆಯಲ್ಲಿ ಹಾಸ್ಯ ನಟ ಕ್ರಿಸ್ ರಾಕ್ರಿಗೆ ವೇದಿಕೆಯ ಮೇಲೆ ಕಪಾಳ ಮೋಕ್ಷ ಮಾಡಿದ್ದ ಪರಿಣಾಮವಾಗಿ ನಟ ವಿಲ್ ಸ್ಮಿತ್ರಿಗೆ 10 ವರ್ಷಗಳ ಕಾಲ ಆಸ್ಕರ್ ಸಮಾರಂಭದಿಂದ ನಿಷೇಧ ಹೇರಲಾಗಿದೆ. ಈ ಬಗ್ಗೆ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ & ಸೈನ್ಸಸ್ ಅಧಿಕೃತ ಹೇಳಿಕೆ ನೀಡಿದೆ.
ಏಪ್ರಿಲ್ 8, 2022 ರಿಂದ 10 ವರ್ಷಗಳ ಅವಧಿಗೆ ವಿಲ್ ಸ್ಮಿತ್ರಿಗೆ ನಿಷೇಧ ಹೇರಲು ಬೋರ್ಡ್ ನಿರ್ಧರಿಸಿದೆ. ವಿಲ್ ಸ್ಮಿತ್ ಯಾವುದೇ ಅಕಾಡೆಮಿ ಕಾರ್ಯಕ್ರಮಗಳಿಗೆ ಹಾಜರಾಗಲು ಅನುಮತಿ ನೀಡಬಾರದು ಎಂದು ಅಕಾಡೆಮಿ ಅಧ್ಯಕ್ಷ ಡೇವಿಡ್ ರೂಬಿನ್ ಹಾಗೂ ಸಿಇಓ ಡಾನ್ ಹಡ್ಸನ್ ಹೇಳಿಕೆ ನೀಡಿದ್ದಾರೆ.
ಲಾಸ್ ಏಂಜಲೀಸ್ನಲ್ಲಿ ನಡೆದ ಆಡಳಿತ ಮಂಡಳಿಯ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಈ ಸಭೆಯನ್ನು ಮೊದಲು ಏಪ್ರಿಲ್ 18ಕ್ಕೆ ಆಯೋಜಿಸಲಾಗಿತ್ತು. ಅಕಾಡೆಮಿಗೆ ಕಳೆದ ವಾರ ಸ್ಮಿತ್ ರಾಜೀನಾಮೆ ಘೋಷಿಸಿದ ಬಳಿಕ ಈ ಚಟುವಟಿಕೆಯನ್ನು ಚುರುಕುಗೊಳಿಸಲಾಯಿತು.