ಬೆಂಗಳೂರು: ಪೆಟ್ರೋಲ್, ಡೀಸೆಲ್, ಎಲ್.ಪಿ.ಜಿ. ಸಿಲಿಂಡರ್, ಅಡುಗೆ ಎಣ್ಣೆ, ವಿದ್ಯುತ್ ದರ ಏರಿಕೆಯಿಂದ ಕಂಗಾಲಾದ ಗ್ರಾಹಕರಿಗೆ ನಂದಿನಿ ಹಾಲಿನ ದರ ಏರಿಕೆ ಶಾಕ್ ಕಾದಿದೆ.
ಶೀಘ್ರದಲ್ಲೇ ನಂದಿನಿ ಹಾಲಿನ ದರ ಏರಿಕೆಯಾಗುವ ಸಾಧ್ಯತೆ ಇದೆ. ಹಾಲಿನ ದರ ಏರಿಕೆ ಮಾಡಲು ಒಂದು ತಿಂಗಳಿನಿಂದ ನಿರಂತರ ಯತ್ನ ನಡೆದಿದೆ. ಈಗಾಗಲೇ KERC ವಿದ್ಯುತ್ ದರ ಏರಿಕೆ ಮಾಡಲು ಅಸ್ತು ಎಂದಿದ್ದು, ಈಗ ಹಾಲಿನ ದರ ಏರಿಕೆ ಮಾಡುವಂತೆ ಹಾಲು ಒಕ್ಕೂಟಗಳು ಪಟ್ಟುಹಿಡಿದಿವೆ.
ವಿದ್ಯುತ್ ದರ ಏರಿಸಿದಂತೆ ಹಾಲಿನ ದರ ಏರಿಕೆ ಮಾಡಲು ಮನವಿ ಮಾಡಲಾಗಿದೆ. ಪ್ರತಿ ಲೀಟರಿಗೆ 5 ರೂಪಾಯಿ ಏರಿಕೆ ಮಾಡಲು ಹಾಲು ಒಕ್ಕೂಟಗಳು ಮನವಿ ಮಾಡಿದೆ. 14 ಹಾಲು ಒಕ್ಕೂಟಗಳಿಂದ ಮುಖ್ಯಮಂತ್ರಿಯವರನ್ನು ಭೇಟಿ ಮಾಡಲಾಗುವುದು.
ಏಪ್ರಿಲ್ 10 ರೊಳಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಹಾಲಿಗೆ 5 ರೂಪಾಯಿ ಹೆಚ್ಚಳ ಮಾಡುವಂತೆ ಕೋರಲಾಗುತ್ತದೆ. ಈಗಾಗಲೇ ಕೆಎಂಎಫ್ ಅಧ್ಯಕ್ಷರೊಂದಿಗೆ ಚರ್ಚೆ ನಡೆಸಿದ್ದು, ಇನ್ನೆರಡು ದಿನಗಳ ಒಳಗೆ ಮುಖ್ಯಮಂತ್ರಿಯವರೊಂದಿಗೆ ಚರ್ಚೆ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.