ಆಗಾಗ ಬೆರಳುಗಳನ್ನು ಮಡಚಿ ಮಡಚಿ ನೆಟ್ಟಿಗೆ ತೆಗೆಯುವ ಅಭ್ಯಾಸ ಹಲವರಿಗೆ ಇರುತ್ತದೆ. ನೀವು ಕೂಡ ಇದೇ ರೀತಿ ಮಾಡುತ್ತಿದ್ರೆ ಅದು ಅನಾರೋಗ್ಯದ ಸಂಕೇತ ಎನ್ನುತ್ತಾರೆ ತಜ್ಞರು. ಈ ರೀತಿ ಪದೇ ಪದೇ ನೆಟ್ಟಿಗೆ ತೆಗೆಯುವುದರಿಂದ ಮೂಳೆ ಸಮಸ್ಯೆಗಳು ಉಂಟಾಗಬಹುದು ಎಂದು ಎಚ್ಚರಿಸಿದ್ದಾರೆ. ಈ ಅಭ್ಯಾಸ ನಮ್ಮ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಯೋಣ.
ಈ ರೀತಿ ನೆಟ್ಟಿಗೆ ತೆಗೆಯುವುದರಿಂದ ಆರ್ಥರೈಟಿಸ್ ಸಮಸ್ಯೆ ಹೆಚ್ಚಾಗುತ್ತದೆಯಂತೆ. ದೇಹದ ಕೀಲುಗಳಲ್ಲಿ ಒಂದು ರೀತಿಯ ದ್ರವವಿರುತ್ತದೆ. ನೀವು ಬೆರಳುಗಳನ್ನು ಮಡಚಿ ನೆಟ್ಟಿಗೆ ತೆಗೆದಾಗ ಕೀಲುಗಳ ನಡುವೆ ಇರುವ ಈ ದ್ರವದ ಅನಿಲವು ಬಿಡುಗಡೆಯಾಗುತ್ತದೆ. ಇದರಿಂದಾಗಿ ಅದರೊಳಗೆ ರೂಪುಗೊಂಡ ಗುಳ್ಳೆಗಳು ಸಹ ಸಿಡಿಯುತ್ತವೆ.
ಬೆರಳುಗಳನ್ನು ಮಡಚಿದಾಗ ಶಬ್ದ ಬರಲು ಇದೇ ಕಾರಣ. ನಿಮ್ಮ ಸಂಧಿಗಳು ಅನೇಕ ಬಾರಿ ಶಬ್ಧ ಮಾಡುತ್ತವೆ, ಅತ್ಯಂತ ವೇಗವಾಗಿ ನಡೆದಾಗ ಕೂಡ ಈ ರೀತಿ ಶಬ್ಧ ಬರಬಹುದು. ದೀರ್ಘಕಾಲದವರೆಗೆ ಈ ರೀತಿ ನೆಟ್ಟಿಗೆ ತೆಗೆಯುವುದರಿಂದ ಕೈಗಳ ಹಿಡಿತದ ಬಲದ ಮೇಲೆ ಪರಿಣಾಮ ಬೀರುತ್ತದೆ. ಕೈಗಳಲ್ಲಿ ಊತವೂ ಉಂಟಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಆದ್ದರಿಂದ, ಬೆರಳನ್ನು ಹೆಚ್ಚು ಸೆಟೆದುಕೊಳ್ಳಬಾರದು.
ಈ ರೀತಿ ಬೆರಳುಗಳಿಂದ ನೆಟ್ಟಿಗೆ ತೆಗೆದಾಗ ನಿಮಗೆ ನೋವಾಗದೇ ಇದ್ದರೆ ಹೆಚ್ಚು ಸಮಸ್ಯೆಯಿಲ್ಲ. ಆದ್ರೆ ಹಲವು ಬಾರಿ ಈ ರೀತಿ ಮಾಡುತ್ತಲೇ ಇದ್ದರೆ ನಿಮಗೆ ಸಂಧಿವಾತ ಶುರುವಾಗಬಹುದು ಅಂತಾ ತಜ್ಞರು ಎಚ್ಚರಿಸಿದ್ದಾರೆ. ಹಾಗಾಗಿ ಆದಷ್ಟು ಬೇಗ ಈ ಅಭ್ಯಾಸವನ್ನು ಬಿಟ್ಟುಬಿಡುವುದು ಒಳಿತು.