ಬೆಂಗಳೂರು: ಸಹಕಾರ ಕ್ಷೇತ್ರವನ್ನು ನಾವೆಲ್ಲರೂ ಸದೃಢಗೊಳಿಸಬೇಕು ಎಂದು ಕೇಂದ್ರ ಸಹಕಾರ ಹಾಗೂ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಸಹಕಾರ ಸಮ್ಮೇಳನದಲ್ಲಿ ನಂದಿನಿ ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ಉದ್ಘಾಟನೆ, ಲಾಂಛನ ಬಿಡುಗಡೆ ಮಾಡಿದ್ದಾರೆ ಸೌಹಾರ್ದ ಸಹಕಾರಿ ಸೌಧವನ್ನು ವರ್ಚುವಲ್ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಸಹಕಾರ ಕ್ಷೇತ್ರ ಸದೃಢವಾದರೇ ರೈತರ ಜೀವನ ಸುಧಾರಿಸಲಿದೆ. ಇಡೀ ದೇಶದಲ್ಲಿ ಕ್ಷೀರ ಸಮೃದ್ಧಿ ಬ್ಯಾಂಕ್ ಆರಂಭವಾಗಿರುವುದು ಕರ್ನಾಟಕದಲ್ಲಿ ಮಾತ್ರ. ಸಹಕಾರ ಸಮ್ಮೇಳನ ಉದ್ಘಾಟಿಸಿರುವುದು ನನಗೆ ಖುಷಿ ತಂದಿದೆ ಎಂದು ಹೇಳಿದ್ದಾರೆ.
ನಾನು ನನ್ನ ಮನೆಗೆ ವಾಪಸ್ ಬಂದ ಭಾವನೆ ವ್ಯಕ್ತವಾಗುತ್ತಿದೆ. ಕರ್ನಾಟಕದ ಸಹಕಾರ ವಲಯ ದೇಶದ ಹಳೆಯ ಸಹಕಾರ ವಲಯವಾಗಿದೆ. ಸಿದ್ದನಗೌಡ ಪಾಟೀಲರು ಸಹಕಾರ ವಲಯದ ನಿರ್ಮಾತೃಗಳಾಗಿದ್ದಾರೆ. ಆ ಮಹಾನ್ ವ್ಯಕ್ತಿಗೆ ನನ್ನ ಪ್ರಣಾಮಗಳು. ಸಹಕಾರ ವಲಯಕ್ಕೆ ಗಾಂಧೀಜಿ, ಪಟೇಲರ ಪ್ರೇರಣೆಯಿದೆ. ನಂದಿನಿ ಉತ್ಪನ್ನ ಕೋಟ್ಯಂತರ ಜನಕ್ಕೆ ತಲುಪುವ ವಿಶ್ವಾಸವಿದೆ ಎಂದರು.
ಬಡವರ ಅಭಿವೃದ್ಧಿ ಇದೇ ಸಹಕಾರ ವಲಯದಿಂದ ಆಗಿದೆ. ಸಹಕಾರ ವಲಯಕ್ಕೆ ಮಹಿಳೆಯರಿಂದ ದೊಡ್ಡ ಕೊಡುಗೆ ನೀಡಲಾಗಿದೆ. ಕರ್ನಾಟಕ ಈ ವಿಚಾರದಲ್ಲಿ ಎ ಗ್ರೇಡ್ ಹೊಂದಿದೆ ಎಂದು ಅಮಿತ್ ಶಾ ಹೇಳಿದ್ದಾರೆ.
ಸಹಕಾರ ಕ್ಷೇತ್ರವನ್ನು ಸಮೃದ್ಧಗೊಳಿಸಲು ಮೋದಿ ಹಲವು ಯೋಜನೆ ಜಾರಿಗೊಳಿಸಿದ್ದಾರೆ. ಇನ್ನಷ್ಟು ಯೋಜನೆ ನೀಡಲಿದ್ದಾರೆ. ಕ್ಷೀರಕ್ರಾಂತಿ ಮತ್ತಷ್ಟು ಉನ್ನತೀಕರಣಗೊಳಿಸಿದರೆ ರೈತರಿಗೆ ಲಾಭವಾಗುತ್ತದೆ. ರೈತರಿಗೆ ಹೈನುಗಾರಿಕೆ ಲಾಭದಾಯಕವಾಗಲು ಕೊಡುಗೆಗಳನ್ನು ಮೋದಿ ನೀಡಿದ್ದಾರೆ. ಸಹಕಾರಿ ಕ್ಷೇತ್ರದಲ್ಲಿ ಆಂದೋಲನವಾಗಬೇಕು. ಆರ್ಥಿಕ ಸಬಲೀಕರಣಗೊಳಿಸಲು ಇದು ತುಂಬಾ ಸಹಕಾರಿಯಾಗಿದೆ. ನಾನು ಇವತ್ತು ತುಂಬಾ ಸಂತೋಷದಿಂದ ಹೇಳುತ್ತಿದ್ದೇನೆ. ಸಹಕಾರ ಕ್ಷೇತ್ರದಲ್ಲಿ ಯಶಸ್ಸು ಗಳಿಸುವುದು ಮೋದಿಯವರ ಗುರಿಯಾಗಿದೆ. ನಮ್ಮ ಸರ್ಕಾರ ಸಹಕಾರ ಕ್ಷೇತ್ರಕ್ಕೆ ಹೆಚ್ಚು ಕೊಡುಗೆ ನೀಡಲಿದೆ ಎಂದು ಹೇಳಿದ್ದಾರೆ.