ಕಾಬೂಲ್: ತಾಲಿಬಾನ್ ಆಡಳಿತವಿರುವ ಅಫ್ಘಾನಿಸ್ತಾನದಲ್ಲಿ ಜನರಿಗೆ ಹಲವಾರು ರೀತಿಯ ನಿಯಮಗಳನ್ನು ಜಾರಿಗೆ ತರುವ ಮೂಲಕ ಪ್ರಪಂಚದಾದ್ಯಂತ ಸುದ್ದಿಯಾಗಿದೆ. ಇದೀಗ ಗಡ್ಡ ತೆಗೆದವರಿಗೆ ಉದ್ಯೋಗ ನೀಡಲಾಗುವುದಿಲ್ಲ ಎಂದು ಹೊಸ ಪ್ರಕಟಣೆಯನ್ನು ಹೊರಡಿಸಿದೆ.
ಆಡಳಿತಾರೂಢ ತಾಲಿಬಾನ್ ಸರ್ಕಾರ, ಎಲ್ಲಾ ಸರ್ಕಾರಿ ಉದ್ಯೋಗಿಗಳಿಗೆ ಗಡ್ಡವನ್ನು ಹೊಂದಿರಲು ಮತ್ತು ಡ್ರೆಸ್ ಕೋಡ್ಗೆ ಬದ್ಧವಾಗಿರಲು ನಿರ್ದೇಶಿಸಿದೆ. ಇದನ್ನು ಪಾಲಿಸದಿದ್ದಲ್ಲಿ ವಜಾ ಮಾಡಲಾಗುವುದು ಎಂದು ತಿಳಿಸಿದೆ.
ಕಠಿಣ ಇಸ್ಲಾಮಿಸ್ಟ್ ಆಡಳಿತವು ಹೇರಿದ ಹಲವಾರು ಹೊಸ ನಿರ್ಬಂಧಗಳಲ್ಲಿ ಇದೀಗ ಹೊಸ ನಿಯಮವನ್ನು ವಿಧಿಸಿದೆ. ನೌಕರರು ಹೊಸ ನಿಯಮಗಳನ್ನು ಅನುಸರಿಸುತ್ತಿದ್ದಾರೆಯೇ ಎಂದು ಪರಿಶೀಲಿಸಲು ಸಚಿವಾಲಯದ ಪ್ರತಿನಿಧಿಗಳು ಸರ್ಕಾರಿ ಕಚೇರಿಗಳ ಪ್ರವೇಶದ್ವಾರಗಳಲ್ಲಿ ಗಸ್ತು ತಿರುಗುತ್ತಿದ್ದಾರೆ ಎಂದು ವರದಿ ತಿಳಿಸಿದೆ.
ಈ ಹೊಸ ನಿಯಮದ ಪ್ರಕಾರ, ಉದ್ಯೋಗಿಗಳು ತಮ್ಮ ಗಡ್ಡವನ್ನು ಬೋಳಿಸಿಕೊಳ್ಳುವುದು ಅಥವಾ ಉದ್ದವಾದ, ಸಡಿಲವಾದ ಟಾಪ್ ಮತ್ತು ಪ್ಯಾಂಟ್ ಹಾಗೂ ಟೋಪಿ ಅಥವಾ ಪೇಟವನ್ನು ಒಳಗೊಂಡಿರುವ ಉಡುಪುಗಳನ್ನು ಧರಿಸುವುದು ಕಾನೂನುಬಾಹಿರವಾಗುತ್ತದೆ. ಕಡ್ಡಾಯ ಡ್ರೆಸ್ ಕೋಡ್ ಅನ್ನು ಅನುಸರಿಸದಿದ್ದರೆ ಅಂತಿಮವಾಗಿ ಕೆಲಸದಿಂದ ವಜಾ ಮಾಡಲಾಗುವುದು ಎಂದು ತಿಳಿಸಲಾಗಿದೆ.