ಮುಂಬೈ: ಪಾಕ್ ಜಲಸಂಧಿಯನ್ನು 13 ಗಂಟೆಗಳಲ್ಲಿ ದಾಟುವ ಮೂಲಕ ವಿಶೇಷಚೇತನ ಬಾಲಕಿ ಹೊಸ ದಾಖಲೆಗೆ ಪಾತ್ರಳಾಗಿದ್ದಾಳೆ.
13 ವರ್ಷದ ಬಾಲಕಿ ಜಿಯಾ ರೈ ಕೇವಲ 13 ಗಂಟೆ 10 ನಿಮಿಷಗಳಲ್ಲಿ ಪಾಕ್ ಜಲಸಂಧಿಯನ್ನು ದಾಟಿದ ಅತ್ಯಂತ ಕಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ. ಭಾರತೀಯ ನೌಕಾಪಡೆಯ ಅಧಿಕಾರಿಯ ಪುತ್ರಿಯಾಗಿರುವ ಜಿಯಾ ಆಟಿಸಂನಿಂದ ಬಳಲುತ್ತಿದ್ದಾಳೆ. ಆದರೆ, ಸಾಧನೆಗೆ ಯಾವುದೂ ಅಡ್ಡಿಯಲ್ಲ ಎಂಬುದನ್ನು ಸಾಧಿಸಿ ತೋರಿಸಿದ್ದಾಳೆ.
ಮಾರ್ಚ್ 20 ರಂದು ಜಿಯಾ 29 ಕಿ.ಮೀ ದೂರವನ್ನು 13 ಗಂಟೆ 10 ನಿಮಿಷಗಳಲ್ಲಿ ಯಶಸ್ವಿಯಾಗಿ ಕ್ರಮಿಸಿದ್ದಾಳೆ. ಈ ಹಿಂದೆ ಬುಲಾ ಚೌಧರಿ ಅವರು 13 ಗಂಟೆ 52 ನಿಮಿಷಗಳ ಕಾಲ ಈಜುವ ಮೂಲಕ ದಾಖಲೆ ಬರೆದಿದ್ದರು. 2004ರ ಈ ದಾಖಲೆಯನ್ನು ಜಿಯಾ ಮುರಿದಿದ್ದಾಳೆ.
ಭಾರತೀಯ ನೌಕಾಪಡೆಯ ಅಧಿಕೃತ ಫೇಸ್‌ಬುಕ್ ಪ್ರೊಫೈಲ್ ನಲ್ಲಿ ಜಿಯಾಳ ಚಿತ್ರ ಸಹಿತ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. ಈ ಪೋಸ್ಟ್ ವೈರಲ್ ಆಗಿದ್ದು, ಬಾಲಕಿಯ ಸಾಧನೆಗೆ ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಪ್ಯಾರಾ ಸ್ವಿಮ್ಮಿಂಗ್ ಫೆಡರೇಶನ್ ಆಫ್ ಇಂಡಿಯಾವು ದೇಶದಲ್ಲಿ ಆಟಿಸಂ ಬಗ್ಗೆ ಜಾಗೃತಿ ಮೂಡಿಸಲು ಈ ಕಾರ್ಯಕ್ರಮವನ್ನು ಆಯೋಜಿಸಿದೆ.