ಪಾನ್ಕಾರ್ಡ್ ಹೊಂದಿರುವವರು ಆಧಾರ್ ಕಾರ್ಡ್ ಜತೆ ಲಿಂಕ್ ಮಾಡಲು ಹಲವು ಬಾರಿ ಗಡುವು ನೀಡಲಾಗಿದ್ದು, ಈ ಬಾರಿ ಇದೇ ತಿಂಗಳ ಗಡುವು ನೀಡಲಾಗಿದೆ. ಮಾರ್ಚ್ 31ರೊಳಗೆ ಪಾನ್-ಆಧಾರ್ ಲಿಂಕ್ ಮಾಡದಿದ್ದರೆ ಪಾನ್ ಕಾರ್ಡ್ ಹೊಂದಿದವರು ಹಲವು ತೊಂದರೆಗೊಳಗಾಗಬೇಕಾಗುತ್ತದೆ.
ನಿಗದಿತ ದಿನಾಂಕದೊಳಗೆ ಪಾನ್-ಆಧಾರ್ ಲಿಂಕ್ ಮಾಡದಿದ್ದರೆ ಪಾನ್ ಕಾರ್ಡ್ ನಿಷ್ಕ್ರಿಯವಾಗುತ್ತದೆ. ಹೀಗಾದರೆ, ಮುಂದಿನ ದಿನಗಳಲ್ಲಿ ಹೆಚ್ಚಿನ ಮೊತ್ತದ ವಹಿವಾಟು ನಡೆಸಲು ಆಗುವುದಿಲ್ಲ. ಡೆಡ್ಲೈನ್ ಮಿಸ್ ಆದರೆ ಆದಾಯ ತೆರಿಗೆ ಕಾಯ್ದೆ-1961ರ ಅಡಿಯಲ್ಲಿ 10 ಸಾವಿರ ರೂ.ವರೆಗೆ ದಂಡ ವಿಧಿಸಲಾಗುತ್ತದೆ. ಡೆಡ್ಲೈನ್ ಬಳಿಕ ಲಿಂಕ್ ಮಾಡಿದರೆ ಒಂದು ಸಾವಿರ ರೂ.ವರೆಗೆ ದಂಡ ವಿಧಿಸಲಾಗುತ್ತಿದೆ.
ಇದರ ಜತೆಗೆ ಇನ್ನೂ ಹಲವು ಸಮಸ್ಯೆಗಳು ಎದುರಾಗುತ್ತವೆ. ನೀವು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಮಾಡಲು ಆಗುವುದಿಲ್ಲ. ಸ್ಟಾಕ್ ಮಾರುಕಟ್ಟೆಯಲ್ಲಿ ಹಣವನ್ನು ಹೂಡಿಕೆ ಸಹ ಮಾಡಲು ಆಗುವುದಿಲ್ಲ. ಬ್ಯಾಂಕ್ನಲ್ಲಿ ಒಂದು ಉಳಿತಾಯ ಖಾತೆ ಸಹ ತೆರೆಯಬೇಕಾದರೆ ತೊಂದರೆಯಾಗುತ್ತದೆ.
ಮಾರ್ಚ್ 31ರೊಳಗಾಗಿ ಪೂರ್ಣಗೊಳಿಸಿ ಎಫ್ಡಿ, ಜಿಎಸ್ಟಿ, ಕೆಸಿಸಿ ಸಂಬಂಧಿ ಈ ಮುಖ್ಯ ಕೆಲಸ
ಆದಾಯ ತೆರಿಗೆ ವಂಚನೆ ತಪ್ಪಿಸಲು ಹಾಗೂ ಒಬ್ಬರೇ ಹಲವು ಪಾನ್ ಕಾರ್ಡ್ಗಳನ್ನು ಪಡೆಯುವುದನ್ನು ನಿಲ್ಲಿಸಲು 2017ರಲ್ಲಿಯೇ ಕೇಂದ್ರ ಸರಕಾರವು ಪಾನ್-ಆಧಾರ್ ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಿದೆ. ಹಲವು ಕಾರಣಗಳಿಂದಾಗಿ ಇದುವರೆಗೆ ಜೋಡಣೆಯ ಗಡುವನ್ನು ವಿಸ್ತರಣೆ ಮಾಡುತ್ತಲೇ ಬಂದಿದೆ. ಆದರೆ, ಈ ಬಾರಿ ದಿನಾಂಕ ವಿಸ್ತರಣೆ ಮಾಡುವ ಯಾವುದೇ ಸಾಧ್ಯತೆ ಇರದಿರುವುದರಿಂದ ಪಾನ್ ಕಾರ್ಡ್ ಹೊಂದಿದವರು ಆನ್ಲೈನ್ನಲ್ಲಿಯೇ ಕೆಲವು ನಿಮಿಷಗಳಲ್ಲಿ ಪಾನ್-ಆಧಾರ್ ಲಿಂಕ್ ಮಾಡುವ ಮೂಲಕ ಮುಂದಿನ ದಿನಗಳಲ್ಲಿ ಉಂಟಾಗುವ ತೊಂದರೆಗಳಿಂದ ಮುಕ್ತವಾಗಿರಿ ಎಂದು ಕೇಂದ್ರ ಸರಕಾರ ತಿಳಿಸಿದೆ.