ಗ್ರೇಟರ್ ನೋಯ್ಡಾದ ಬಾದಲ್ಪುರದಲ್ಲಿ ಬಾಡಿಗೆ ಅಪಾರ್ಟ್ಮೆಂಟ್ನಲ್ಲಿದ್ದ ವ್ಯಕ್ತಿಯೊಬ್ಬನನ್ನು ಸುತ್ತಿಗೆಯಿಂದ ಕೊಂದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೃತ ವ್ಯಕ್ತಿಯನ್ನು ನೀರಜ್ ಕುಮಾರ್ ಎಂದು ಗುರುತಿಸಲಾಗಿದೆ.
ಮೃತ ನೀರಜ್ ಕಳೆದ 2 ವರ್ಷಗಳಿಂದ ಮಾಂತಾ ದೇವಿ ಎಂಬ ಆರೋಪಿ ಮಹಿಳೆಯ ಜೊತೆ ವಾಸವಿದ್ದ ಎನ್ನಲಾಗಿದೆ. ಆತನ ಕುಡಿತದ ಚಟದಿಂದಾಗಿ ಮಾಂತಾ ದೇವಿ ಬೇಸತ್ತಿದ್ದಳು ಎನ್ನಲಾಗಿದೆ.
ಮಾಂತಾದೇವಿಯು ಶ್ರವಣ್ ದಾಸ್ ಎಂಬಾತನನ್ನು ವಿವಾಹವಾಗಿದ್ದಳು. ಪತಿಗೆ ಕರೆ ಮಾಡಿದ್ದ ಮಾಂತಾ ದೇವಿ, ನೀರಜ್ ಮದ್ಯ ಸೇವಿಸಿ ಆಗಾಗ ನನಗೆ ಥಳಿಸುತ್ತಾನೆ ಎಂದು ಹೇಳಿದ್ದಾಳೆ.
ಹೀಗಾಗಿ ದಂಪತಿ ನೀರಜ್ನನ್ನು ಕೊಲೆ ಮಾಡಲು ಪ್ಲಾನ್ ಮಾಡಿದ್ದರು. ಶುಕ್ರವಾರ ಮುಂಜಾನೆ ದಾಸ್ ಬಾಡಿಗೆ ಮನೆಗೆ ಬಂದಿದ್ದಾರೆ. ಇಬ್ಬರ ನಡುವೆ ವಾದ ಏರ್ಪಟ್ಟಿದೆ. ಇದರಿಂದ ಕೋಪಗೊಂಡ ದಾಸ್ ಸುತ್ತಿಗೆಯಿಂದ ನೀರಜ್ ಮುಖಕ್ಕೆ ಬಾರಿಸಿದ್ದಾನೆ. ಅಲ್ಲದೇ ಟಿಫಿನ್ ಬಾಕ್ಸ್ ಬಳಸಿ ಕೂಡ ನೀರಜ್ ಮೇಲೆ ದಾಳಿ ನಡೆಸಿದ್ದಾನೆ.
ಬಾಡಿಗೆದಾರ ನೀರಜ್ ನೆಲದ ಮೇಲೆ ಬಿದ್ದಿದ್ದನ್ನು ಕಂಡು ಮನೆ ಮಾಲೀಕ ಪೊಲೀಸರಿಗೆ ಕರೆ ಮಾಡಿದ್ದಾನೆ. ಪೊಲೀಸರು ತನಿಖೆ ನಡೆಸಿದ ಬಳಿಕ ನಿಜಾಂಶ ಬೆಳಕಿಗೆ ಬಂದಿದೆ ಎನ್ನಲಾಗಿದೆ.