ಊಹಿಸಿಕೊಳ್ಳಿ. ಕಚೇರಿಗೆ ಹೊರಡಲು ನಿಮಗೆ ತಡವಾಗಿರುತ್ತದೆ. ನೀವು ಊಬರ್ ಅಪ್ಲಿಕೇಶನ್ ಮೂಲಕ ಕ್ಯಾಬ್ ಬುಕ್ ಮಾಡಿರುತ್ತೀರಿ. ಅದು ಸರಿಯಾದ ಸಮಯಕ್ಕೆ ಬರುತ್ತದೋ ಇಲ್ಲವೋ ಎಂಬ ಆತಂಕ ಒಂದೆಡೆ ಇರುತ್ತದೆ. ಈ ಎಲ್ಲಾ ಆತಂಕದ ನಡುವೆ ಕ್ಯಾಬ್ ನಿಮ್ಮ ಮನೆ ಮುಂದೆ ಬರುತ್ತದೆ. ಅಲ್ಲಿ ಇರುವ ಡ್ರೈವರ್ ಬೇರಾರೂ ಅಲ್ಲ ಬದಲಾಗಿ ಸ್ವತಃ ಊಬರ್ ಮುಖ್ಯಸ್ಥನೇ ಆದರೆ ನಿಮಗೆ ಎಷ್ಟು ಆಶ್ಚರ್ಯ ಎನಿಸಬಹುದು..? ಅಂದಹಾಗೆ ಇದೇನು ಕಟ್ಟು ಕತೆಯಲ್ಲ. ಊಬರ್ನ ಭಾರತ ಹಾಗೂ ದಕ್ಷಿಣ ಏಷ್ಯಾದ ಅಧ್ಯಕ್ಷರಾದ ಪ್ರಭಜೀತ್ ಸಿಂಗ್ ಊಬರ್ ಚಾಲಕನಾಗಿ ಕಾರ್ಯನಿರ್ವಹಿಸಿದ್ದು ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಕೆಲವರು ಊಬರ್ ಗ್ರಾಹಕರು ತಮಗಾದ ಈ ಅನುಭವವನ್ನು ಲಿಂಕ್ಡಿನ್ನಲ್ಲಿ ಹಂಚಿಕೊಂಡಿದ್ದಾರೆ. ಪ್ರಭಜೀತ್ ಸಿಂಗ್ ಒಂದು ಸಂಶೋಧನೆಯ ಭಾಗವಾಗಿ ಹೀಗೆ ರಸ್ತೆಗೆ ಇಳಿದಿದ್ದಾರೆ ಎನ್ನಲಾಗಿದೆ.
ಲಿಂಕ್ಡಿನ್ ಬಳಕೆದಾರರಾದ ಅನನ್ಯಾ ದ್ವಿವೇದಿ ಪ್ರಭಜೀತ್ ಸಿಂಗ್ ಜೊತೆಯಲ್ಲಿ ಸ್ಪೆಷಲ್ ಊಬರ್ ರೈಡ್ಗೆ ತೆರಳಿದ ಅನುಭವವನ್ನು ಹಂಚಿಕೊಂಡಿದ್ದಾರೆ. ನಾನು ಆಫೀಸಿಗೆ ತೆರಳಲು ಕ್ಯಾಬ್ ಬುಕ್ ಮಾಡಿದ್ದ ವೇಳೆಯಲ್ಲಿ ನನಗೆ ಚಾಲಕರಾಗಿ ಊಬರ್ ಬಾಸ್ ಬಂದಿದ್ದಾರೆ ಎಂಬ ವಿಚಾರವನ್ನು ಮೊದಲು ನಂಬಲು ಸಾಧ್ಯವಾಗಲಿಲ್ಲ. ಬಳಿಕ ನಾನು ಗೂಗಲ್ ಮಾಡಿ ಈ ವಿಚಾರವನ್ನು ದೃಢಪಡಿಸಿಕೊಂಡೆ. ಅವರು ಯಾವುದೋ ಸಂಶೋಧನೆಯ ಭಾಗವಾಗಿ ಈ ರೀತಿ ಕ್ಯಾಬ್ ಚಾಲನೆ ಮಾಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ಅಲ್ಲದೇ ಇನ್ನೂ ಅನೇಕರು ಈ ರೀತಿ ತಮ್ಮ ಅನುಭವವನ್ನು ಶೇರ್ ಮಾಡಿದ್ದು ಊಬರ್ ಸರ್ವೀಸ್ನ್ನು ಸುಧಾರಿಸಲು ಕಂಪನಿಯ ಬಾಸ್ ಈ ರೀತಿ ಸರಳತೆ ಮೆರೆದಿರುವುದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.